ಮೈಸೂರು : ಚಲಿಸುತ್ತಿದ್ದ ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿ, ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದು ಮಹಿಳೆ ಮತ್ತು ಚಾಲಕ ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಬಳಿ ನಡೆದಿದೆ.
ಹೊರಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಮೈಸೂರು ಮೂಲದ ಚಾಲಕ ಸುನೀಲ್ ಕುಮಾರ್ ಸೇವೆಸಲ್ಲಿಸುತ್ತಿದ್ದನು. ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಗ್ರಾಮದ ಲಕ್ಷ್ಮಮ್ಮ ಬಸ್ ಡಿಕ್ಕಿಯಿಂದ ಸ್ಥಳದಲ್ಲೇ ಮತಪಟ್ಟ ಮಹಿಳೆ.
ಕೇರಳ ರಾಜ್ಯದ ಮಾನಂದವಾಡಿಯಿಂದ ಕೆಎಸ್ಸಾರ್ಟಿಸಿ ಬಸ್ ಹೆಚ್.ಡಿ.ಕೋಟೆಯಿಂದ ಬರುತ್ತಿತ್ತು. ಚಾಲಕನಿಗೆ ಹಠಾತ್ ಹೃದಯಾಘಾತವಾಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದನು. ಬಸ್ ಸ್ಟೇರಿಂಗ್ ಮೇಲೆ ಪ್ರಜ್ಣೆ ತಪ್ಪಿ ಚಾಲಕ ಮಲಗಿದ್ದನು.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ ಜಮೀನಿಗೆ ನುಗ್ಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಆರಂಭದಲ್ಲಿ ಚಾಲಕನಿಗೆ ಹೃದಯಾಘಾತವಾದ ವಿಷಯ ತಿಳಿಯದೆ ಚಾಲಕನ ಮೇಲೆ ಗ್ರಾಮಸ್ಥರು ಮುಗಿಬಿದ್ದರು.
ಎರಡು ಮೃತದೇಹಗಳನ್ನು ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಸ್ಥಳಾಂತರಿಸಿದರು.ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

