ನಂಜನಗೂಡು: ಹಾಡಹಗಲೇ ಮನೆ ಬೀಗ ಮುರಿದು 80 ಗ್ರಾಂ ಚಿನ್ನ, ಬೆಳ್ಳಿ, 1.40 ಲಕ್ಷ ನಗದು ಹಣವನ್ನು ದೋಚಿ ಪರಾರಿಯಾದ ಘಟನೆ ನಂಜನಗೂಡಿನ ಚಾಮುಂಡಿ ಟೌನ್ ಶಿಪ್ ನಲ್ಲಿ ನಡೆದಿದೆ.
ಮನೆ ಮಾಲೀಕರು ಬಂದರೂ ವಿಚಲಿತರಾಗದ ಖದೀಮರು ಕಾರ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ನಡೆದ ಕಳ್ಳತನಕ್ಕೆ ಚಾಮುಂಡಿ ಟೌನ್ ಶಿಪ್ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಪುನೀತ್ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಾರಿನಲ್ಲಿ ಬಂದ ಕಳ್ಳರು ಬಾಗಿಲು ಮೀಟಿ ಕೃತ್ಯವೆಸಗಿದ್ದಾರೆ.
ದಂಪತಿಗಳಿಬ್ಬರು ಮನೆ ಮುಂಬಾಗಿಲು ಮತ್ತು ಗೇಟ್ಗೆ ಬೀಗ ಹಾಕಿ, ಕೆಲಸ ನಿಮಿತ್ತ ತೆರಳಿದ್ದಾರೆ. ಹೊಂಚು ಹಾಕುತ್ತಿದ್ದ ಖದೀಮರು ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಪ್ರವೇಶಿಸಿ ಕೃತ್ಯವೆಸಗಿದ್ದಾರೆ. ಓರ್ವ ಮನೆ ಮುಂಭಾಗ ಕಾರಿನಲ್ಲಿ ಕುಳಿತಿದ್ದಾನೆ ಮತ್ತೋರ್ವ ಹಿಂಬದಿಯಿಂದ ಬಾಗಿಲು ಮುರಿದು ಪ್ರವೇಶಿಸಿದ್ದಾನೆಂದು ಹೇಳಲಾಗಿದೆ.
ಮನೆಗೆ ಹಿಂದಿರುಗಿದ ದಂಪತಿ ಕಾರನ್ನ ನೋಡಿದ್ದಾರೆ. ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ, ಕಾರಿನಲ್ಲಿದ್ದ ವ್ಯಕ್ತಿ ಮನೆಯೊಳಗಿದ್ದ ವ್ಯಕ್ತಿಗೆ ಸಿಗ್ನಲ್ ನೀಡಿದ್ದಾನೆ. ಈ ವೇಳೆ ಚಿನ್ನಾಭರಣ ಮತ್ತು ನಗದು ಜೊತೆ ಮನೆಯೊಳಗಿದ್ದ ವ್ಯಕ್ತಿ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾನೆಂದು ಹೇಳಲಾಗಿದೆ.
ಮಾಲೀಕರ ಕಣ್ಮುಂದೆಯೇ ಕೃತ್ಯ ನಡೆದರೂ ಅಸಹಾಯಕರಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ರಘು, ಎಸ್ಐ ರಘು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

