ಮೈಸೂರು: ಶಾಲೆಗಾಗಿ ಮಂಜೂರಾಗಿದ್ದ ಭೂಮಿಯನ್ನು ಅನಧಿಕೃತ ವ್ಯಕ್ತಿಗಳು ಕಾನೂನು ಬಾಹೀರವಾಗಿ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬೋಗಾದಿ ಗ್ರಾಮಸ್ಥರು ಶಾಂತಿಯುತ ಪ್ರತಿಭಟನೆ ನಡೆಸಿದರು.

ಬೋಗಾದಿಯ ಹರಿಗಿರಿ ಸೇವಾ ಪ್ರತಿಷ್ಠಾನದ ಬಳಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಭೂಮಿಯನ್ನು ಸಾರ್ವಜನಿಕ ಉದ್ದೇಶವಲ್ಲದೇ ಬೇರೆ ಉದ್ದೇಶಕ್ಕೆ ಬಳಸದಂತೆ ಒತ್ತಾಯಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗ್ಯಾರೇಜ್ ರವಿ ಮಾತನಾಡಿ, ಬೋಗಾದಿ ಗ್ರಾಮದಲ್ಲಿನ ಸರ್ವೇ ನಂಬರ್ 32 ವಿವಾಧಿತ ಭೂಮಿ 1997-98ನೇ ಇಸವಿಯಲ್ಲಿ ಶಾಲೆ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಪ್ರಶ್ನಿತ ಹರಿಗಿರಿ ಸೇವಾ ಪ್ರತಿಷ್ಠಾನಕ್ಕೆ ಸರ್ಕಾರದಿಂದ 25 ಗುಂಟೆ ಜಾಗ ಮಂಜೂರಾಗಿದೆ. ಆದರೆ ಪ್ರಸ್ತುತ ಎಂ.ನಾಗರಾಜು ಎಂಬ ವ್ಯಕ್ತಿ ಉದ್ದೇಶಿತ ಭೂಮಿಯನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಫೆ.4ರಂದು ತಹಸೀಲ್ದಾರ್ ಮಹೇಶ್, ಎಸಿಪಿ ಗಜೇಂದ್ರ ಪ್ರಸಾದ್ ಮತ್ತು ಸರಸ್ವತಿಪುರಂ ಠಾಣಾ ಇನ್ಸ್ಪೆಕ್ಟರ್ ಪುರುಷೋತ್ತಮ್ ನೇತೃತ್ವದಲ್ಲಿ ಶಾಂತಿ ಸಭೆ ನಡೆದು ಭೂಮಿಯನ್ನು ಯತಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ್ದರೂ ನಾಗರಾಜು ಎಂಬ ವ್ಯಕ್ತಿ ಏಕಾಏಕಿ ಜೆಸಿಬಿ ಕರೆಸಿ ಜಾಗದಲ್ಲಿದ್ದ ಒಂದು ಪಾಳು ಮನೆಯನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಜಾಗ ಸಾರ್ವಜನಿಕ ಉದ್ದೇಶಕಷ್ಟೇ ಬಳಕೆಯಾಗಬೇಕು. ಅನಧಿಕೃತ ವ್ಯಕ್ತಿಯ ಪಾಲಾಗಬಾರದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟುಕೊಡೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ಯಾರೇಜ್ ರವಿ, ಅರುಣ, ದೊಡ್ಲಿಂಗನ ರವಿ, ಪೈಲ್ವಾನ್ ಕೃಷ್ಣ, ತ್ಯಾಗು, ಕಿರಣ್ ಕುಮಾರ್, ಭರತ್, ಕಾಂತರಾಜು, ರಘು, ಹಾಲಿನ ರೇವಣ್ಣ, ಶಶಿ, ಈಶ್ವರ್, ವಸಂತ್, ಪ್ರೇಮಸಾಗರ್, ಕೃಷ್ಣ, ಅವಿನಾಶ್, ಪ್ರಜು, ಸತ್ಯ ಮತ್ತು ಭೋಗಾದಿ ಗ್ರಾಮಸ್ಥರು ಪಾಲ್ಗೊಂಡಿದ್ದರು.