ಮೈಸೂರು: ಚಳಿ, ಮಳೆ ಎನ್ನದೆ ಮುಂಜಾನೆಯೇ ಮನೆಬಿಟ್ಟು ಬೀದಿಗೆ ಬಂದು ಕಸ ತೆಗೆದು ಬೀದಿಗಳನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಕುಟುಂಬಕ್ಕೆ ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಂಬಳಿಯನ್ನು ವಿತರಿಸಲಾಯಿತು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆ ಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ನಿವಾಸಿಗಳಿಗೆ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಕಂಬಳಿ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ದೇಶದ ಶೋಷಿತರಿಗೆ ಸಮಾನತೆ ನೀಡಲು ಜೀವನವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಹೃನ್ಮನಗಳಲ್ಲಿ ಸದಾ ಜೀವಂತ ಎಂದರು. ‘ದೇಶ, ವಿದೇಶಗಳಲ್ಲಿ ಶಿಕ್ಷಣ ಪಡೆದು ಶೋಷಿತರ ಸಮಾನತೆಗಾಗಿ ಶಾಸನ ಬದ್ಧ ಹಕ್ಕು ನೀಡಲು ಸಂವಿಧಾನ ರಚಿಸಿದರು. ಹಣ, ಅಧಿಕಾರದ ಲಾಲಸೆಗೊಳಗಾಗದೆ ನಿಸ್ವಾರ್ಥ ಸೇವೆ ಸಲ್ಲಿಸಿದರು.
ವಿಶ್ವ ಸಂಸ್ಥೆ ಅವರ ಜನ್ಮ ದಿನಾಚರಣೆಯನ್ನು ವಿಶ್ವ ಜ್ಞಾನ ದಿನಾಚರಣೆಯನ್ನಾಗಿ ಆಚರಿಸಲು ಘೋಷಣೆ ಮಾಡಿದೆ. ಅವರನ್ನು ವಿಶ್ವ ಗುರುಗಳನ್ನಾಗಿ ಸ್ವೀಕರಿಸುವ ಮನಸ್ಸುಗಳು ಹುಟ್ಟಿಕೊಳ್ಳಬೇಕಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಆರೋಹಳ್ಳಿ ತಾಲೂಕು ಪಂಚಾಯಿತಿ ಸದಸ್ಯರಾದ ಸುರೇಶ್, ಉಮೇಶ್, ಮಮತಾ, ಸೂರಜ್, ಸದಾಶಿವ, ಚಂದ್ರು, ಹಾಗೂ ಇನ್ನಿತರರು ಹಾಜರಿದ್ದರು.

