ನಂಜನಗೂಡು: ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ಕಾಯ್ದೆ ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಎಚ್ಚರಿಕೆ ನೀಡಿದರು.
ನಗರದ ತಾಲ್ಲೂಕು ಕಛೇರಿ ಮುಂಭಾಗ ಮಂಗಳವಾರ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ಕಾಯ್ದೆ ವಿರುದ್ಧ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಪ್ರತಿಭಟನೆ ಯಲ್ಲಿ ಭಾಗವಹಿಸಿ, ಸರ್ಕಾರದ ಮಸೂದೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಮಾತನಾಡಿದರು. ಡಾ. ಬಿ ಆರ್ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅಧಿಕಾರವಿದೆ. ಚುನಾಯಿತ ಪ್ರತಿನಿಧಿಗಳು ಮಾತನಾಡಬಹುದು. ಆದರೆ ಜನಸಾಮಾನ್ಯರು ಮಾತನಾಡುವ ಹಾಗಿಲ್ಲ ಎಂಬುದು ಸರಿಯಲ್ಲ. ಇದು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ ಸಂಘ ಸಂಸ್ಥೆಗಳಿಗೂ ಅನ್ವಯವಾಗುತ್ತದೆ.
ನಂಜನಗೂಡಿನಲ್ಲಿ ಕಾನೂನು ಸುವ್ಯವಸ್ಥೆ, ಹದಗೆಟ್ಟಿದೆ. ಮಾಧ್ಯಮದವರು ಕೂಡ ಮಾತನಾಡುವಂತಿಲ್ಲ. ಸಾಮಾಜಿಕ ಬಹಿಷ್ಕಾರ ಕಾಯ್ದೆಯನ್ನು ಸ್ವಾಗತಿಸುತ್ತೇನೆ ಡಾ.ಹೆಚ್.ಸಿ ಮಹದೇವಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸರ್ಕಾರ ಇದ್ದಾಗ 40 ಪರ್ಸೆಂಟ್ ಸರ್ಕಾರ ಎಂದು ಹೇಳಿದರಲ್ಲ. ಅದು ದ್ವೇಷ ಭಾಷಣ ಆಗುವುದಿಲ್ಲವೇ. ಕಾಂಗ್ರೆಸ್ನವರು ಕಾನೂನನ್ನು ಚಾಕು ಎಂದು ಕೊಂಡಿದ್ದಾರೆ ಇದು ಚಾಕು ಅಲ್ಲ ಬ್ಲೇಡು. ಎರಡು ಕಡೆಯೂ ಕತ್ತರಿಸುತ್ತದೆ.

ಮಸೂದೆ ತರಬೇಕಾದರೆ ಯೋಚನೆ ಮಾಡಿ ತರಬೇಕು. ಹಾಗಾದರೆ ಇವರ ಉದ್ದೇಶವೇನು. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮಗೆ ಮಾತನಾಡಲು ಸ್ವಾತಂತ್ರ್ಯವಿದೆ. ಯಾವ ಧರ್ಮ ಬೇಕಾದರೂ ಸ್ವೀಕರಿಸುವ ಸ್ವಾತಂತ್ರ್ಯವೂ ಇದೆ. ಇದನ್ನು ಮೊಟಕು ಗೊಳಿಸಲು ಇದನ್ನು ತಂದಿದ್ದಾರೆ. ಇದಕ್ಕೆ ಗೃಹ ಮಂತ್ರಿಗಳು ಸ್ಪಷ್ಟೀಕರಣ ಕೊಡಬೇಕು. ಕೂಡಲೆ ಈ ಮಸೂದೆಯನ್ನು ಹಿಂಪಡೆಯಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ ಮಾತನಾಡಿ, ರಾಜ್ಯ ಸರ್ಕಾರ ತಂದಿರುವ ಈ ಕಾಯ್ದೆ ರಾಜ್ಯದ ಜನರಿಗೆ ದುರದೃಷ್ಟಕರ ಎನ್ನಬಹುದು. ಸಾಮಾನ್ಯ ಜನರ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳಲು ಇವರಿಂದ ಸಾಧ್ಯವಿಲ್ಲ. ಕಾಯ್ದೆ ಜಾರಿಗೆ ತರುವ ಬದಲು, ಅಧಿಕಾರಕ್ಕಾಗಿ ಕುರ್ಚಿ ಕಿತ್ತಾಟ ನಡೆಯುತ್ತಿದೆ. ರಾಜ್ಯದಲ್ಲಿ ಮುಂದೆ ರಾಜ್ಯಪಾಲರ ಅಧಿಕಾರ ಬರಬಹುದು ಎಂದರು. ಬಳಿಕ ತಹಶೀಲ್ದಾರ್ ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮೈಸೂರು ಜಿಲ್ಲಾ ಗ್ರಾಮಂತರ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ, ನಗರ ಅಧ್ಯಕ್ಷ ಸಿದ್ದರಾಜು, ಗ್ರಾಮಾಂತರ ಅಧ್ಯಕ್ಷ ಕೆಂಡಗಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್, ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಪ್ಪ, ಮನೋಜ್, ಸಿದ್ದರಾಜು, ಸಿಂಧುವಳ್ಳಿ ಕೆಂಪಣ್ಣ, ಬಾಲ ಚಂದ್ರು, ಬಿ.ಎಸ್ ಮಹದೇವಪ್ಪ, ಕೃಷ್ಣಪ್ಪಗೌಡ, ಹರದನಹಳ್ಳಿ ಬಸಪ್ಪ, ಶಿರಮಳ್ಳಿ ಮಹದೇವಸ್ವಾಮಿ, ಸಿಂಧುವಳ್ಳಿ ಪುರ ಮಲ್ಲೇಶ್, ಹಂಚಿಪುರ ಕೆಂಪಣ್ಣ, ಹೊರಳವಾಡಿ ಮಹೇಶ್, ಹಂಡುವಿನಹಳ್ಳಿ ರಾಜು, ಸುರೇಶ್ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

