ನಂಜನಗೂಡು: ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಂವಿಧಾನ ಬದಲಾವಣೆ ವಿಚಾರದ ಬಗ್ಗೆ ಹೇಳಿಕೆಯನ್ನು ಖಂಡಿಸಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ನಂಜನಗೂಡು ಬಿಜೆಪಿ ಕಾರ್ಯಕರ್ತರಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ವೃತ್ತದ ಬಳಿ ಜಮಾವಣಿಗೊಂಡ ಹತ್ತಾರು ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಡಿ ಕೆ ಶಿವಕುಮಾರ್ ಭಾವಚಿತ್ರವನ್ನು ಸುಟ್ಟು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಮಾಜಿ ಜಿ.ಪಂ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ ಮಾತನಾಡಿ , ಕಾಂಗ್ರೆಸ್ ಸರ್ಕಾರ ನೆಹರು ಕಾಲದಿಂದಲೂ ಸಂವಿಧಾನದ ಬಗ್ಗೆ ಗದಪ್ರಹಾರ ಮಾಡುತ್ತಿದ್ದಾರೆ. ಇವತ್ತು ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ. ಸಂವಿಧಾನ ಬದಲಾವಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕಾಂಗ್ರೆಸ್ ಸರ್ಕಾರ ಸಂವಿಧಾನ ರಕ್ಷಣೆ ಮಾಡುತ್ತೀವಿ ಅಂತ ಹೇಳುತ್ತಾ ಅಧಿಕಾರಕ್ಕೆ ಬಂದರು.

ಅಧಿಕಾರ ಬಂದ ನಂತರ ಸಂವಿಧಾನದ ಬಗ್ಗೆ ಅಗೌರವ ತೋರುತ್ತಿದ್ದಾರೆ. ಎಸ್ಸಿ ಎಸ್ಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡು ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಹನಿ ಟ್ರ್ಯಾಪ್ ಬಗ್ಗೆ ಉನ್ನತ ತನಿಖೆ ಆಗಬೇಕು. ಕೆಲವು ನಿಗಮಗಳಲ್ಲಿ ಶೂನ್ಯ ಹಣ ನೀಡಿದ್ದಾರೆ. ನಮ್ಮ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಮಾಡಿದ್ದ ಕಾಮಗಾರಿಗಳನ್ನು ಈಗ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕೆಂಡಗಣ್ಣಪ್ಪ, ಸಿದ್ದರಾಜು, ಜಿಲ್ಲಾ ಯುವ ಮೋರ್ಚಾ ಮಧುರಾಜ್, ಮಹದೇವಸ್ವಾಮಿ, ಶ್ರೀನಿವಾಸ ರೆಡ್ಡಿ, ನಗರಸಭಾ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಂಜುನಾಥ್, ಮಹದೇವ ಪ್ರಸಾದ್, ವಳಗೆರೆ ಪುಟ್ಟಸ್ವಾಮಿ, ರಾಘವೇಂದ್ರ, ಸಿದ್ದು, ಸಚಿನ್, ಮನೋಜ್ ಸೇರಿದಂತೆ ಇತರರು ಇದ್ದರು.