ನಂಜನಗೂಡು: ಬಿಜೆಪಿ ಪಕ್ಷದವರು ಮೀಸಲಾತಿ ವಿರೋಧಿಗಳು, ಕಾಂತರಾಜ್ ವರದಿಯ ಮುಖ್ಯ ಶಿಫಾರಸ್ಸು ಹಿಂದುಳಿದ ವರ್ಗದವರಿಗೆ ಮೀಸಲಾತಿ ಪ್ರಮಾಣ ಹೆಚ್ಚು ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಂಜನಗೂಡು ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಮೈಸೂರು, ತಿ. ನರಸೀಪುರ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ರೈತರಿಗೆ ಸಾಗುವಳಿ ಪತ್ರ ವಿತರಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಈಗಾಗಲೇ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ನಾಳೆ ಸಚಿವ ಸಂಪುಟದಲ್ಲಿ ಇದರ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಿದ್ದಾರೆ. ಇದನ್ನು ಸ್ವೀಕಾರ ಮಾಡಬೇಕು ಬೇಡವೋ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಕಾಂತರಾಜ ವರದಿ ಆಯೋಗದಲ್ಲಿ 32 ಪ್ರತಿಶತ ಇದ್ದ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ 52 ಪ್ರತಿಶತ ಮಾಡಬೇಕು ಎಂಬುದು ಉಲ್ಲೇಖವಾಗಿದೆ. ಎಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಸಿಗುತ್ತದೆ ಅಂತ ಬಿಜೆಪಿ ಪಕ್ಷದವರು ವಿರೋಧ ಮಾಡುತ್ತಾರೆ. ಇವರ ವಿರೋಧಕ್ಕೆ ನಾವು ಹೆಚ್ಚಿನ ಬೆಲೆ ಕೊಡುವುದಿಲ್ಲ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಮೀಸಲಾತಿ ಬಗ್ಗೆ ತಿಳಿಸಲಾಗಿತ್ತು.
ಪ್ರಣಾಳಿಕೆ ಪ್ರಕಾರ ಭರವಸೆಯನ್ನು ಜಾರಿಗೆ ತರುವಂತ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು. ಮುಂದಿನ ಮೇ ತಿಂಗಳೊಳಗೆ ಜಿ.ಪಂ ಮತ್ತು ತಾ.ಪಂ ಚುನಾವಣೆ ನಡೆಯುವ ಬಗ್ಗೆ ಸುಳಿವು ನೀಡಿದರು.
ಸಭೆಯಲ್ಲಿ ಮೈಸೂರು ತಾಲ್ಲೂಕಿನ ದಂಡಾಧಿಕಾರಿ ಮಹೇಶ್ ಕುಮಾರ್, ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸೇರಿದಂತೆ ಅಕ್ರಮ ಸಕ್ರಮ ಸಮಿತಿ ಸದಸ್ಯರು, ಹಾಗೂ ಅಧಿಕಾರಿಗಳು ಹಾಜರಿದ್ದರು.

