ನಂಜನಗೂಡು: ಅಂಗನವಾಡಿ ಕೇಂದ್ರಗಳಿಗೆ ದಾನವಾಗಿ ನೀಡಿದ ಪೀಠೋಪಕರಣಗಳಿಗೆ ಗ್ರಾಮ ಪಂಚಾಯ್ತಿ ಪಿಡಿಓ ಬಿಲ್ ರೈಸ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಮಹಾಮೈತ್ರಿ ಸಂಘಟನೆಯ ರಾಜ್ಯಾಧ್ಯಕ್ಷ ಕಣೇನೂರು ಚಂದ್ರಶೇಖರ್ ಪಿಡಿಓ ಅಕ್ರಮವನ್ನ ದಾಖಲೆ ಸಮೇತ ಬಯಲಿಗೆ ಎಳೆದಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ 87 ಸಾವಿರಕ್ಕೆ ಬಿಲ್ ಮಾಡಿ ತಗಲಾಕಿಕೊಂಡಿದ್ದಾರೆ.

ನಂಜನಗೂಡು ತಾಲ್ಲೂಕು ಕುರಿಹುಂಡಿ ಗ್ರಾಮ ಪಂಚಾಯ್ತಿ ಪಿಡಿಓ ಜ್ಯೋತಿ ವಿರುದ್ದ ಆರೋಪ ಕೇಳಿಬಂದಿದೆ. ಜೆ.ಪಿ.ಹುಂಡಿ ಆಶ್ರಮದ ಮ್ಯಾನೇಜರ್ 11 ಅಂಗನವಾಡಿ ಕೇಂದ್ರಗಳಿಗೆ 87 ಸಾವಿರ ಮೌಲ್ಯದ ಪೀಠೋಪಕರಣಗಳನ್ನ ದಾನವಾಗಿ ನೀಡಿದ್ದಾರೆ.

ಕುರಿಹುಂಡಿ ಗ್ರಾಮ ಪಂಚಾಯ್ತಿ ಪಿಡಿಓ ಜ್ಯೋತಿ ಗ್ರಾಮ ಪಂಚಾಯ್ತಿ ವತಿಯಿಂದ ನೀಡಿರುವುದಾಗಿ ದಾಖಲೆಗಳನ್ನ ಸೃಷ್ಟಿಸಿ ಹಣ ಗುಳುಂ ಮಾಡಿದ್ದಾರೆ. ಈ ಸಂಬಂಧ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಚಂದ್ರಶೇಖರ್ ದೂರು ನೀಡಿದ್ದಾರೆ.

ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಜ್ಯೋತಿ ರಜೆ ಹಾಕಿ ನಾಪತ್ತೆಯಾಗಿದ್ದಾರೆ. ಜ್ಯೋತಿ ರವರ ಮೇಲೆ ಇಂತಹ ಅನೇಕ ಹಗರಣಗಳು ಇವೆ ಎಂದು ಆರೋಪಿಸಿರುವ ಚಂದ್ರಶೇಖರ್ ಈ ಅಧಿಕಾರಿಯನ್ನ ಅಮಾನತುಪಡಿಸುವಂತೆ ಆಗ್ರಹಿಸಿದ್ದಾರೆ.