ನಂಜನಗೂಡು: ನಂಜನಗೂಡು ತಾಲ್ಲೂಕಿನ  ಹದಿನಾರು ಗ್ರಾಮದ ಹೊರವಲಯದಲ್ಲಿರುವ ಬಿಳಿಕೆರೆ ಶ್ರೀ ಮಹದೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಚೋಳರ ಕಾಲದ ಅತಿ ಪುರಾತನ ಹಾಗೂ ಇತಿಹಾಸ ಹೊಂದಿರುವ ಬಿಳಿಕೆರೆ  ಮಹದೇಶ್ವರ ದೇವಾಲಯವು ಹಲವು ಕಾಲಗಳಿಂದ ಅಭಿವೃದ್ಧಿ ಕಾಣದೆ ಶಿಥಿಲಾವಸ್ಥೆ ತಲುಪಿತ್ತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ  ಮಹದೇವಪ್ಪ ಅವರು 6 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸಿದರು.

ಕಳೆದ ನ.13 ರಂದು ಗಣಪತಿ ಸುಬ್ರಹ್ಮಣ್ಯ ವಿಗ್ರಹ ಪ್ರತಿಷ್ಠಾಪನೆ ವಿಮಾನ ಗೋಪುರ ಕಳಸ ಪ್ರತಿಷ್ಠಾಪನ ದೇವಸ್ಥಾನ ಸಂರಕ್ಷಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಕಾರ್ತಿಕ ಮಾಸದ ಅಂಗವಾಗಿ ಸ್ವಾಮಿಯವರಿಗೆ ಮುಂಜಾನೆ ೪ ಗಂಟೆಯಿಂದಲೇ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಉಪಚಾರ ಪೂಜೆ ಸಹಸ್ರ ಬಿಲ್ವಾರ್ಚನೆ, ಇನ್ನೂ ಅನೇಕ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ನಂತರ ಹಾಲರವಿ ಉತ್ಸವ ನಡೆಯಿತು. ನೂತನವಾಗಿ ನಿರ್ಮಿಸಿದ ವಿವಿಧ ಹೂ ಮತ್ತು ವಸ್ತ್ರಗಳಿಂದ ಅಲಂಕರಿಸಿದ ರಥದಲ್ಲಿ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.

ದೇವಾಲಯದ ಆವರಣದ ಸುತ್ತ ಪ್ರದಕ್ಷಣೆ ಹಾಕಲಾಯಿತು. ಈ ಸಂದರ್ಭದಲ್ಲಿ ಉಘೇ ಉಘೇ ಮಹದೇಶ್ವರ ಎಂಬ ಘೋಷವೂ ಮೂಳಗಿತ್ತು. ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.