ಮೈಸೂರು: ಬೈಕ್ ಸವಾರನೋರ್ವ ಕಾಡಾನೆ ದಾಳಿಯಿಂದ ಕೊಂಚದರಲ್ಲೇ ಪಾರಾದ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮೈಸೂರು – ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ.

ಇಬ್ಬರು ಬೈಕ್ನಲ್ಲಿ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಮಾನಂದವಾಡಿಯಿಂದ ಮೈಸೂರು ಕಡೆ ಬರುತ್ತಿದ್ದರು. ಈ ವೇಳೆ, ಕಾಡಿನಿಂದ ಏಕಾಏಕಿ ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ, ಯುವಕರ ಮೇಲೆ ದಾಳಿಗೆ ಮುಂದಾಗಿದೆ. ಆಗ ಚಾಲಕ ತಕ್ಷಣ ಬೈಕ್ ನಿಲ್ಲಿಸಿದ್ದಾನೆ.

ಹಿಂಬದಿ ಸವಾರ ಬೈಕ್ನಿಂದ ಇಳಿದು ಹಿಂದಕ್ಕೆ ಓಡಿ ಬಂದಿದ್ದು, ಚಾಲಕ ಬೈಕ್ನ್ನು ಹಿಂತೆಗೆದುಕೊಂಡು ಬರುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಈ ವೇಳೆ ಸಮೀಪವೇ ಬಂದ ಕಾಡಾನೆ, ಅದೇ ರಸ್ತೆಯಲ್ಲಿ ಬಂದ ಲಾರಿ ಹಾರ್ನ್ ಶಬ್ದ ಹಾಗೂ ಚೀರಾಟ ಕಂಡು ಘೀಳಿಡುತ್ತಾ ರಸ್ತೆ ಪಕ್ಕಕ್ಕೆ ತೆರಳಿದೆ.