ಮೈಸೂರು: ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ಕೆಎಸ್ಆರ್ಟಿಸಿ ಬಸ್ ಹರಿದು ಸ್ಥಳದಲ್ಲಿಯೇ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮೈಸೂರು ನಗರದ ವಿವೇಕಾನಂದ ವೃತ್ತದ ಬಳಿ ನಡೆದಿದೆ.

ಪುರುಷೋತ್ತಮಯ್ಯ (61) ಮೃತ ದುರ್ದೈವಿ. ರಸ್ತೆಯ ಎಡಬದಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ಹಿಂದಿನಿಂದ ಸಾರಿಗೆ ಬಸ್ ಟಚ್ ಆಗಿದೆ. ಇದರಿಂದ ಬೈಕ್ ಸವಾರ ನಿಯಂತ್ರಣ ತಪ್ಪಿ ಕೆಳಗಡೆ ಬಿದ್ದಿದ್ದಾನೆ.

ಕೆಳಗೆ ಬಿದ್ದ ಬೈಕ್ ಸವಾರನ ತಲೆ ಮೇಲೆ ಬಸ್ ಚಕ್ರ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.