ನಂಜನಗೂಡು: ರಸ್ತೆ ದಾಟುತ್ತಿದ್ದ ಕಾಡು ಹಂದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಕಾಡು ಹಂದಿ ಮೃತ ಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ನೇರಳೆ ಗೇಟ್ ಬಳಿ ನಡೆದಿದೆ. ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಕವಲಂದೆ ಗ್ರಾಮದ ನೇರಳೆ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ.

ಅಪರಿಚಿತ ಬೈಕ್ ಚಾಲಕ ಕವಲಂದೆ ಗ್ರಾಮದ ಕಡೆಯಿಂದ ನಂಜನಗೂಡು ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಕಾಡು ಹಂದಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಕಾಡು ಹಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬೈಕ್ ಸವಾರನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಮತ್ತು ಬೈಕ್ ಜಖಂಗೊಂಡಿದೆ.

ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು, ಬೈಕ್ ವಾಹನ ಸವಾರನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕವಲಂದೆ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.