ನಂಜನಗೂಡು : ನಂಜನಗೂಡು ನಗರಸಭೆಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಿಂದ ಗೆಲುವು ಸಾಧಿಸಿ ಆಡಳಿತ ನಡೆಸುತ್ತಿದ್ದ ನಾಲ್ಕು ಜನ ನಗರಸಭಾ ಸದಸ್ಯರಿಗೆ ಮೈಸೂರು ಜಿಲ್ಲಾಧಿಕಾರಿಗಳ ನ್ಯಾಯಾಲಯ ಶಾಕ್ ನೀಡಿದೆ.

ಅನರ್ಹಗೊಂಡಿರುವ ನಂಜನಗೂಡು ನಗರಸಭೆಯ ನಾಲ್ವರು ಸದಸ್ಯರ ಸದಸ್ಯತ್ವವನ್ನು ಮೈಸೂರು ಜಿಲ್ಲಾ ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಅನರ್ಹಗೊಳಿಸಿ ಆದೇಶ ಮಾಡಲಾಗಿದೆ.

ಬಿಜೆಪಿ ಚಿನ್ಹೆಯಿಂದ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿದ್ದ ನಾಲ್ವರು ಸದಸ್ಯರಾದ ಗಿರೀಶ್ ಕುಮಾರ್ ಟಿಎಂ, ಗಾಯತ್ರಿ, ಮೀನಾಕ್ಷಿ ನಾಗರಾಜು, ವಿಜಯಲಕ್ಷ್ಮೀ ಅನರ್ಹಗೊಂಡಿರುವ ಸದಸ್ಯರು.

ನಂಜನಗೂಡು ನಗರದ ವಾರ್ಡ್ ನಂಬರ್ 1 ನೇ ಸದಸ್ಯ ಗಿರೀಶ್ ಕುಮಾರ್ ಟಿಎಂ, ವಾರ್ಡ್ ಸಂಖ್ಯೆ 12 ಸದಸ್ಯೆ ಗಾಯತ್ರಿ, ವಾರ್ಡ್ ನಂಬರ್ 22 ಸದಸ್ಯೆ ಮೀನಾಕ್ಷಿ ನಾಗರಾಜು, ವಾರ್ಡ್ ಸಂಖ್ಯೆ 27 ರ ಸದಸ್ಯೆ ವಿಜಯಲಕ್ಷ್ಮೀ ಎಂಬುವವರನ್ನು ಸಚೇತನ (ವಿಪ್) ಅನ್ನು ಉಲ್ಲಂಘನೆ ಮಾಡಿರುವುದರಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅದಿನಿಯಮ 1987 ಸೆಕ್ಷನ್ 3(1)(b) ಉಲ್ಲಂಘನೆಯ ಆಧಾರದ ಮೇಲೆ ನಾಲ್ವರು ನಗರಸಭಾ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.