ನಂಜನಗೂಡು: ನಂಜನಗೂಡು ತಾಲ್ಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ವರ್ಷಗಳೇ ಉರುಳಿದರೂ ಚರಂಡಿಗಳು ಮಾತ್ರ ಸ್ವಚ್ಛತೆ ಕಾಣದೆ, ಗಬ್ಬೆದ್ದು ನಾರುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ಸುದ್ದಿ ವಾಹಿನಿಯಲ್ಲಿ ವರದಿಯನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ನವಿಲೂರು ಗ್ರಾಮ ಪಂಚಾಯಿತಿ ಆಡಳಿತ ಚರಂಡಿಗಳನ್ನು ಸ್ವಚ್ಛತೆಗೊಳಿಸಿದ್ದಾರೆ.

ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ದುರ್ವಾಸನೆ ಮತ್ತು ಚರಂಡಿಯಲ್ಲಿ ತುಂಬಿರುವ ಕೊಳಚೆ ನೀರು ಮತ್ತು ಕಸ ಕಡ್ಡಿಗಳು ಎಲ್ಲರನ್ನು ಸ್ವಾಗತಿಸುತ್ತಿತ್ತು. ಗ್ರಾಮದ ಕುರುಬ ಸಮುದಾಯ ವಾಸಿಸುವ ಬೀದಿಯಲ್ಲಿರುವ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು, ಗಬ್ಬೆದ್ದು ನಾರುತ್ತಿತ್ತು.

ಚರಂಡಿಗೆ ಕಸ ಕಡ್ಡಿಗಳು, ಪ್ಲಾಸ್ಟಿಕ್ ವಸ್ತುಗಳು ತುಂಬಿಕೊಂಡು ದುರ್ನಾತ ಬೀರುತ್ತಿತ್ತು. ಅಲ್ಲದೆ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿಯಾದರೆ ಸಾಕು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮಕ್ಕಳು ಮತ್ತು ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿತ್ತು, ಚರಂಡಿಯನ್ನು ಸ್ವಚ್ಛತೆ ಮಾಡುವಂತೆ ಕಳೆದ ಎರಡು ಮೂರು ವರ್ಷಗಳಿಂದಲೂ ನವಿಲೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರು ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ.
ಈ ಬಗ್ಗೆ ನ್ಯೂಸ್ ಕರ್ನಾಟಕ ಸುದ್ದಿವಾಹಿನಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ, ವಿಸ್ತ್ರುತವಾದ ವರದಿಯನ್ನು ಬಿತ್ತಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ನವಿಲೂರು ಗ್ರಾಮ ಪಂಚಾಯತಿಯ ಆಡಳಿತ ಬ್ಯಾಳಾರುಹುಂಡಿ ಗ್ರಾಮದಲ್ಲಿ ಸ್ವಚ್ಛತೆಗೊಳಿಸಿದ್ದಾರೆ. ನ್ಯೂಸ್ ಕರ್ನಾಟಕ ಸುದ್ದಿ ವಾಹಿನಿಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

