ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಪಿಯು ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಮತ್ತು ಪ್ರಾಂಶುಪಾಲೆ ವಸಂತಕುಮಾರಿ ಮತ್ತು ನಿಲಯ ಪಾಲಕ ಮಹದೇವಪ್ಪ ಅತಿಥಿ ಶಿಕ್ಷಕ ಗುರುಸ್ವಾಮಿ ಎಂಬುವರನ್ನು ಅಮಾನತು ಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು.
ಈ ಬಗ್ಗೆ ನಿಮ್ಮ ನ್ಯೂಸ್ ಕರ್ನಾಟಕ ಸುದ್ದಿವಾಹಿನಿಯಲ್ಲಿ ವರದಿಯನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ವಸತಿ ಶಾಲೆಗೆ ದೌಡಾಯಿಸಿ ರಾತ್ರಿ ವಾಸ್ತವ್ಯ ಹೂಡಿ ಶಿಕ್ಷಕರಿಗೆ ಫುಲ್ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಉಪ ವಿಭಾಗಾಧಿಕಾರಿ ಆಶಾಪ್ಪ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಕ್ರೈಸ್ಟ್ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ವಸತಿ ಶಾಲೆಗಳ ಎಇಇ ಬಸವರಾಜು ಆಗಮಿಸಿ ವಸತಿ ಶಾಲೆ ಮತ್ತು ನಿಲಯಗಳನ್ನು ಪರಿಶೀಲನೆ ನಡೆಸಿದರು. ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಸ್ವಚ್ಛತೆ ಇಲ್ಲದೆ ಇರುವುದನ್ನು ಕಂಡು ಅಧಿಕಾರಿಗಳು ಗರಂ ಆಗಿದ್ದರು. ಶಾಲೆಯ ಅವ್ಯವಸ್ಥೆ ನೋಡಿ ಪ್ರಾಂಶುಪಾಲೆ ವಸಂತಕುಮಾರಿ ಮತ್ತು ನಿಲಯ ಪಾಲಕ ಮಹದೇವಪ್ಪ, ಅತಿಥಿ ಶಿಕ್ಷಕ ಗುರುಸ್ವಾಮಿ ಸೇರಿದಂತೆ ಶಿಕ್ಷಕರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಇಷ್ಟ ಇದ್ದರೆ ಕೆಲಸ ಮಾಡಿ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಮೂವರನ್ನು ಅಮಾನತು ಮಾಡಿ, ಶಿಕ್ಷಕರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮಕ್ಕಳು 40ಕ್ಕು ಹೆಚ್ಚು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಇನ್ನು ಒಂದು ವಾರದ ಒಳಗಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಎ.ಸಿ ಆಶಪ್ಪ ಹೇಳಿದರು. ಇದು ನ್ಯೂಸ್ ಕರ್ನಾಟಕ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.

