ನಂಜನಗೂಡು: ಪಟ್ಟಣದಲ್ಲಿ ಮೇ 04 ರಂದು ಸಾಂಕೇತಿಕವಾಗಿ ಭಗೀರಥ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಉಪ್ಪಾರ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಬಳಿಕ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಅವರನ್ನು ಆಹ್ವಾನ ಮಾಡಿ ಅದ್ದೂರಿಯಾಗಿ ಭಗಿರಥ ಜಯಂತಿಯನ್ನು ನಡೆಸಲು ಸಮಾಜದ ಮುಖಂಡರು ಸಲಹೆ ನೀಡಿದ್ದೀರಿ. ಇಂದು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತೇನೆ.

ಮುಖ್ಯಮಂತ್ರಿಗಳು ದಿನಾಂಕ ಸೂಚಿಸಿದ ಬಳಿಕ ಮತ್ತೊಂದು ಸಭೆಯನ್ನು ಕರೆದು ಕಾರ್ಯಕ್ರಮ ರೂಪಿಸುವ ಬಗ್ಗೆ ಮತ್ತೊಂದು ಸಭೆಯನ್ನು ಕರೆದು ತೀರ್ಮಾನ ಮಾಡೋಣ. ಕಳೆದ ಬಾರಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಚರ್ಚಾ ಸ್ಪರ್ಧೆ ಮಾಡಿ ಅರ್ಥಪೂರ್ಣ ಜಯಂತಿಯನ್ನು ಆಚರಿಸಲಾಗಿತ್ತು. ಅದೇ ಮಾದರಿಯಲ್ಲಿ ನಡೆಸೋಣ ಎಂದರು. ಜಿಲ್ಲಾ ಮಟ್ಟಕ್ಕಿಂತ ತಾಲ್ಲೂಕು ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಜಯಂತಿ ಕಾರ್ಯಕ್ರಮ ಮಾಡುತ್ತೇವೆ ಎಂದರು.

ನಂತರ ಹೆಮ್ಮರಗಾಲ ಸೋಮಣ್ಣ ಮಾತನಾಡಿ, ಭಗೀರಥ ಜಯಂತಿ ಆಚರಣೆ ಮಾಡಿ ಮೂರು ವರ್ಷಗಳಾಗಿವೆ. ಮುಖ್ಯಮಂತ್ರಿ ಅವರನ್ನು ಕರೆಸಿ, ನಂಜನಗೂಡು ಶಾಸಕರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಜಯಂತಿ ಆಚರಿಸಲು ಸಮಾಜದ ಮುಖಂಡರು ತೀರ್ಮಾನಿಸಿದ್ದಾರೆ. ಸಭೆಗೆ ಸಮಾಜದ 10 ಸಾವಿರಕ್ಕೂ ಹೆಚ್ಚು ಜನರ ಸೇರುವ ನಿರೀಕ್ಷೆ ಇದೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಮೂಗಶೆಟ್ಟಿ, ಹೆಮ್ಮರಗಾಲ ಸೋಮಣ್ಣ, ಹಾಡ್ಯ ರಂಗಸ್ವಾಮಿ, ಹೆಡತಲೆ ದೊರೆಸ್ವಾಮಿ ನಾಯಕ, ಕುರಹಟ್ಟಿ ಮಹೇಶ್, ಲತಾ ಸಿದ್ದಶೆಟ್ಟಿ, ಸಿಎಂ ಶಂಕರ್, ನಾಗರಾಜು, ಟಿ.ಪಿ ಶಿವಣ್ಣ, ಗೋವಿಂದರಾಜು, ಮಹದೇವ್, ಮುದ್ದು ಮಾದಶೆಟ್ಟಿ, ಸಿದ್ದರಾಜು, ನಾಗಮಣಿ ಶಂಕ್ರಪ್ಪ, ಬಾಲಚಂದ್ರ, ತರದಲೆ ಮಹದೇವು, ಶ್ರೀನಿವಾಸ್, ಸಿದ್ದಶೆಟ್ಟಿ ಸೇರಿದಂತೆ ಇತರರು ಹಾಜರಿದ್ದರು.