ನಂಜನಗೂಡು: ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲ್ಲೂಕು ಸಮಿತಿ ವತಿಯಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುಂದು ಕೊರತೆ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ರಾಜ್ಯ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಭೆಯಲ್ಲಿ ಗೈರು ಹಾಜರಾಗಿರುವುದನ್ನು ನೋಡಿ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಶಾಕ್ ಆಯ್ತು. ಶಿಶು ಅಭಿವೃದ್ಧಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಗ್ಯಾರಂಟಿ ಸಭೆಗೆ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಹಾಜರಾಗಿದ್ದರು.

ಇಂದಿರಾನಗರ ಗ್ರಾಮದ ಮಹಿಳೆಯೊಬ್ಬರು ಗೃಹ ಲಕ್ಷ್ಮೀ ಯೋಜನೆ ಹಣದಿಂದ ಪೆಟ್ರೋಲ್ ಮತ್ತು ಇಸ್ಪೀಟ್ ಮಾರಾಟ ಮಾಡುತ್ತಿದ್ದೀನಿ ಎಂದು ಹೇಳಿದ ಕೂಡಲೇ ಸಭೆಯಲ್ಲಿದ್ದ ಸಭಿಕರಲ್ಲಿ ತಳವಳ ಶುರುವಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಸೇರಿದಂತೆ ಗ್ಯಾರಂಟಿಗಳಿಗೆ ಹಣ ಇಲ್ಲ. ಅಭಿವೃದ್ಧಿಗೆ ಹಣ ಇಲ್ಲ ಎಂದು ಸಾಕಷ್ಟು ಇಲ್ಲಸಲ್ಲದ ವಿಚಾರಗಳನ್ನು ನಮ್ಮ ವಿರೋಧಿಗಳು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಶಾಸಕ ಟಾಂಗ್ ನೀಡುವುದರ ಜೊತೆಗೆ ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಮುಂದೆ ಇದೆ ಒಂದು ಮುಕ್ಕಾಲು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇವೆ ಎಂದು ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಕೆ.ಮಾರುತಿ, ಸಿಡಿಪಿಒಗಳಾದ ಭವ್ಯಶ್ರೀ, ಮಂಜುಳಾ, ಚೆಸ್ಕಾಂ ಎಇಇ ದೇವರಾಜಯ್ಯ ಸೇರಿದಂತೆ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.