ನಂಜನಗೂಡು: ಮಧ್ಯರಾತ್ರಿ ವೇಳೆ ಕಿಡಿಗೇಡಿ ಯುವಕರ ಗುಂಪೊಂದು ಮುಚ್ಚಿದ್ದ ಬಾರ್ ಬಲವಂತವಾಗಿ ಓಪನ್ ಮಾಡಿಸಿ ಕ್ಯಾಷಿಯರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟೆಲ್ ಕೇಸ್ ಹೊತ್ತೊಯ್ದ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಕ್ಯಾಷಿಯರ್ ವೆಂಕಟೇಶ್, ಕಿಶೋರ್, ಚಂದನ್ ಸೇರಿದಂತೆ 7 ಮಂದಿ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹುಲ್ಲಹಳ್ಳಿಯಲ್ಲಿರುವ ನ್ಯೂ ಕಾರವಾನ್ ಬಾರ್ ನಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿ ವೇಳೆ ಬಾರ್ ಕ್ಲೋಸ್ ಮಾಡಿ ಲೆಕ್ಕ ಮಾಡಿಕೊಳ್ಳುತ್ತಿದ್ದ ವೇಳೆ ಕಿಶೋರ್, ಚಂದನ್ ಹಾಗೂ 5 ಮಂದಿ ಬಂದು ಬಾಗಿಲ ಬಳಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಶೆಟರ್ ಓಪನ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ.
ಕ್ಯಾಷ್ ಬಾಕ್ಸ್ ಮೇಲೆ ಕುಳಿತು ಧಮ್ಕಿ ಹಾಕುತ್ತಾ ಬೆದರಿಸಿ ಬಿಯರ್ ಹಾಗೂ ವಿಸ್ಕಿ ಬಾಟಲ್ ಗಳನ್ನ ಬಾಕ್ಸ್ ಒಂದಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಕ್ಯಾಶಿಯರ್ ವೆಂಕಟೇಶ್ ದಾಂಧಲೆ ಮಾಡಿ ಧಮ್ಕಿ ಹಾಕಿದ 7 ಮಂದಿ ಪುಂಡರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಮತ್ತು ಸಿಬ್ಬಂದಿಗಳು ಪುಂಡಾಟ ತೋರಿದ ಕಿಶೋರ್ ಹಾಗೂ ಚಂದನ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

