ನಂಜನಗೂಡು: ಸುರಕ್ಷತಾ ಪರಿಕರಗಳನ್ನ ಧರಿಸದೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಂತಿಲ್ಲ. ಪೌರಕಾರ್ಮಿಕರ ಸುರಕ್ಷತೆಗಾಗಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಿದೆ. ಆದ್ರೆ ನಂಜನಗೂಡಿನಲ್ಲಿ ಪೌರಕಾರ್ಮಿಕರಿಗೆ ಇರುವ ಸುರಕ್ಷತಾ ಕ್ರಮ ಮಾಯವಾಗಿದೆ.
ಸುರಕ್ಷತಾ ಪರಿಕರಗಳನ್ನ ಧರಿಸದೆ ಚರಂಡಿ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಪೌರಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ದುಗ್ಗಹಳ್ಳಿ ಹಾಗೂ ಹುಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ಗ್ಲೌಸ್,ಮಾಸ್ಕ್ ಹಾಗೂ ಶೂ ಧರಿಸದೆ ಕೊಳೆತು ನಾರುತ್ತಿರುವ ಚರಂಡಿಗೆ ಇಳಿದು ಸ್ವಚ್ಛಗೊಳಿಸುತ್ತಿದ್ದಾರೆ.
ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತರಲಾದ ಕಟ್ಟುನಿಟ್ಟಿನ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಈ ವಿಚಾರದಲ್ಲಿ ಜಾಣಕುರುಡರಂತೆ ವರ್ತಿಸುತ್ತಿರುವುದು ಶೋಚನೀಯ. ಸಿಎಂ ಕ್ಷೇತ್ರದಲ್ಲೇ ಪೌರಕಾರ್ಮಿಕರನ್ನ ನಿರ್ಲಕ್ಷಿಸಿದ್ರೆ ಉಳಿದ ಕ್ಷೇತ್ರಗಳಲ್ಲಿ ಪರಿಸ್ಥಿತಿ ಏನು..? ಈಗಾಗಲೇ ಇಂತಹ ನಿರ್ಲಕ್ಷ್ಯ ಧೋರಣೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಇನ್ನಾದ್ರೂಸಂಭಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ. ಅನಾಹುತ ಸಂಭವಿಸುವ ಮುನ್ನ ನಿಯಮಗಳನ್ನ ಪಾಲಿಸುವರೇ…?.

