ನಂಜನಗೂಡು: ಮೂರು ವರ್ಷ ಕಳೆದರೂ ಆರ್ ಸಿ ಕಾರ್ಡ್ ನೀಡಿಲ್ಲ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ನಂಜನಗೂಡಿನ ಬಜಾಜ್ ಶೋರೂಂ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.‌

ನಂಜನಗೂಡು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಜಾಜ್ ಶೋರೂಂ ಮುಂಭಾಗದಲ್ಲಿ ಜಮಾಯಿಸಿದ ರೈತರು ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಬಜಾಜ್ ಶೋರೂಂ ನಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಶೋರೂಂ ಗೆ ಬಂದ ರೈತನೊಂದಿಗೆ ಸರಿಯಾಗಿ ವರ್ತನೆ ಮಾಡಿಲ್ಲ. ಬೇಜವಾಬ್ದಾರಿಯಿಂದ ಮ್ಯಾನೇಜರ್ ವರ್ತನೆ ಮಾಡಿರುವುದು ರೈತರಿಗೆ ಅಪಮಾನವಾಗಿದೆ.

ಮಲ್ಲಹಳ್ಳಿ ಗ್ರಾಮದ ರವಿ ಎಂಬುವರು 84 ಸಾವಿರ ವೆಚ್ಚದಲ್ಲಿ 2023 ರಲ್ಲಿ ಬಜಾಜ್ ಫೈನಾನ್ಸ್ ನಿಂದ ಸಾಲವನ್ನು ಪಡೆದುಕೊಂಡು ಬೈಕನ್ನು ಖರೀದಿ ಮಾಡಿದ್ದಾರೆ. ರಿಜಿಸ್ಟರ್ ಮತ್ತು  ಇನ್ಸೂರೆನ್ಸ್ ಹಾಗೂ ಆರ್.ಸಿ ಕಾರ್ಡ್ ಸೇರಿ ಹಣವನ್ನು ಪಾವತಿ ಮಾಡಿಸಿಕೊಂಡಿದ್ದಾರೆ.

ಮೂರು ವರ್ಷ ಕಳೆಯುತ್ತಾ ಬಂದಿದ್ದರು ಬಜಾಜ್ ಶೋರೂಂ ಆಡಳಿತ ಆರ್.ಸಿ  ಕಾರ್ಡ್ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಅನ್ಯಾಯವಾಗಿರುವ ವ್ಯಕ್ತಿಗೆ ನ್ಯಾಯ ಕೊಡಿಸುವಂತೆ ದಿಡೀರ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ.

ನ್ಯಾಯ ಸಿಗುವ ತನಕ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಪ್ರತಿಭಟನೆಗೆ ಮಣಿದ ಬಜಾಜ್ ಶೋರೂಂ ಮ್ಯಾನೇಜರ್ ಕ್ಷಮೆ ಯಾಚಿಸಿ, ಇನ್ನೆರಡು ದಿನದಲ್ಲಿ ಅವರಿಗೆ ಆರ್‌ಸಿ ಕಾರ್ಡ್ ನೀಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಕತ್ವಾಡಿಪುರ ಶಿವಣ್ಣ, ಕೃಷ್ಣಾಪುರ ಮೋಹನ್ , ಸೂರಹಳ್ಳಿ ಸೋಮೇಶ್, ಕವಲಂದೆ ಹೋಬಳಿ ಅಧ್ಯಕ್ಷ ಮಲ್ಲಹಳ್ಳಿ ರವಿ ಹಾಜರಿದ್ದರು.