ಮೈಸೂರು: ನಗರದ ಪ್ರತಿಷ್ಠಿತ ಮಹಾರಾಜ ಕಾಲೇಜಿನ ಪಾರಂಪರಿಕ ಕಟ್ಟಡದ ಆವರಣದಲ್ಲಿ ನಶಾಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿ. ಷಣ್ಮುಗಂ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ ಕುಟುಂಬ ಹಾಗೂ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನ ನಡೆಸಬೇಕು. ನಶಾಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಅಪರಾಧ ಶಾಸ್ತ್ರ ವಿಭಾಗದ ಅಧ್ಯಾಪಕ ಪ್ರೊ. ದರ್ಶನ ಅವರು ನಶಾಮುಕ್ತ ಭಾರತ ವಿಷಯ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪ್ರೊ. ಮಂಜುಳಾ ಕಾರ್ಯಕ್ರಮಾಧಿಕಾರಿಗಳಾದ ಡಾ.ಪಿ.ಎಸ್. ಮಧುಸೂಧನ್, ಡಾ. ಎಸ್. ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಶಾಮುಕ್ತ ಭಾರತದ ಕುರಿತು ಜಾಗೃತಿ ಮೂಡಿಸುವ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ನಶಾಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

