ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಮೈಸೂರು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸರ್ಕಾರದ ಮಹತ್ವಾಕಾಂಕ್ಷೆಯ ‘ಮಾಂಗಲ್ಯ ಭಾಗ್ಯ’ ಎಂಬ ಸರಳ ಸಾಮೂಹಿಕ ವಿವಾಹದಲ್ಲಿ 24 ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಸರ್ಕಾರದ ವತಿಯಿಂದ ನಡೆದ ಮಾಂಗಲ್ಯ ಭಾಗ್ಯ ಸರಳ ವಿವಾಹಕ್ಕೆ ಸ್ಥಳೀಯ ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಬಡಜನರ ಮದುವೆಗೆ ಬಾರದಿರುವುದು ಅಸಮಾಧಾನ ತಂದಿದೆ. ಜನಪ್ರತಿನಿಧಿಗಳ ಗೈರು ಹಾಜರಿಯಲ್ಲಿ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತು.
ಬಳಿಕ ಸರಳ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಿವರಾಜು ಮತ್ತು ನಗರಸಭಾ ಅಧ್ಯಕ್ಷ ಶ್ರೀಕಂಠ ರವರು ವರನಿಗೆ ಮಾಂಗಲ್ಯ ವಿತರಿಸಿದರು. ಮಂಗಳವಾದ್ಯದೊಂದಿಗೆ ಅಕ್ಷತೆ ಹಾಕಿ ನೆರೆದಿದ್ದ ಅಧಿಕಾರಿಗಳು ಮತ್ತು ನೆಂಟರಿಷ್ಟರು ಶುಭ ಹಾರೈಸಿದರು.
ಮದುವೆಗೆ ಆಗಮಿಸಿದ ಸಾರ್ವಜನಿಕರು ಮತ್ತು ನೆಂಟರಿಷ್ಟರಿಗೆ ದೇವಾಲಯದ ದಾಸೋಹ ಭವನದಲ್ಲಿ ಹೋಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು,
ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ ಹರೀಶ್, ವೃತ್ತ ನಿರೀಕ್ಷಕರಾದ ರವೀಂದ್ರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಈಶ್ವರ್, ಉಪ ನೋಂದಣಾಧಿಕಾರಿ ವಿವೇಕ್, ಸೇರಿದಂತೆ ಹಲವರು ಭಾಗವಹಿಸಿದ್ದರು.

