ನಂಜನಗೂಡು: ತಾಲೂಕಿನ ಸಿಎಂ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಶುಲ್ಲಕ ಕಾರಣಕ್ಕೆ ವಿಶೇಷ ಚೇತನನಿಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ, ಕ್ರಮ ಕೈಗೊಳ್ಳುವಂತೆ ತಾಲೂಕಿನ ವಿಕಲಚೇತನರ ಒಕ್ಕೂಟದಿಂದ ತಹಶೀಲ್ದಾರ್ ಅವರಿಗೆ ಮಂಗಳವಾರ ದೂರು ಸಲ್ಲಿಸಿದರು.
ಮಾರ್ಚ್ 31ರಂದು ತಗಡೂರು ಗ್ರಾಮದ ವಿಶೇಷ ಚೇತನ ಮುದ್ದು ಮಾದೇಗೌಡ ಎಂಬುವರಿಗೆ ರಸ್ತೆಯಲ್ಲಿ ತಿರುಗಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಿಕರಾದ ಬಸವಣ್ಣ ಹಾಗೂ ಕುಟುಂಬದ ಇಬ್ಬರು ಸದಸ್ಯರು ದಿನ ನಿತ್ಯ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಮೂರು ಚಕ್ರದ ವಾಹನದಲ್ಲಿ ವಿಶೇಷ ಚೇತನ ಮನೆಗೆ ಆಗಮಿಸುತ್ತಿದ್ದಾಗ ರಸ್ತೆಗೆ ಮುಳ್ಳು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಏಕಏಕಿ ಹಲ್ಲೆ ನಡೆಸಿದ ಪರಿಣಾಮ ತಾಲೂಕು ಆಸ್ಪತ್ರೆಯಲ್ಲಿ ಮುದ್ದು ಮಾದೇಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಆದರೆ ಹಲ್ಲೆ ನಡೆಸಿದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲೂಕಿನ ವಿಕಲಚೇತನರ ಒಕ್ಕೂಟದ ಪದಾಧಿಕಾರಿಗಳು ಆಸ್ಪತ್ರೆಗೆ ತೆರಳಿ, ವಿಶೇಷ ಚೇತನರಿಗೆ ಸಾಂತ್ವನ ತಿಳಿಸಿ ಕಂದಾಯ ಇಲಾಖೆ ಸಿರಸ್ತೆದಾರ್ ರಾಜು ಮೂಲಕ ತಹಸಿಲ್ದಾರ್ ಅವರಿಗೆ ದೂರು ಸಲ್ಲಿಸಿದರು.
ಎರಡು ಕಾಲುಗಳು ಇಲ್ಲದ ವ್ಯಕ್ತಿಗೆ ಯಾವುದೇ ಕನಿಕರ ತೋರಿಸದೆ ಹಲ್ಲೆ ನಡೆಸಿರುವುದು ತಪ್ಪು. ಹಲ್ಲೆ ನಡೆಸಿರುವ ಬಸವಣ್ಣ ಹಾಗೂ ಕುಟುಂಬಸ್ಥರಿಗೆ ಸರಿಯಾದ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೆರೆಹುಂಡಿ ಶಿವಣ್ಣ, ಎಂ ಆರ್ ಡಬ್ಲ್ಯೂ ರಂಗಸ್ವಾಮಿ, ವಿ ಆರ್ ಡಬ್ಲ್ಯೂ ನಂಜಪ್ಪ ನಿರ್ಮಲ, ಸವಿತಾ, ಲಿಂಗರಾಜು, ಲಕ್ಷ್ಮಿ, ಸವಿತಾ, ರವಿ ಕೆ ಎಂ ಸೇರಿದಂತೆ ವಿಕಲಚೇತನರ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

