ನಂಜನಗೂಡು: ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದರು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಮಾತನಾಡಿದ ಅವರು, ರಾತ್ರೋರಾತ್ರಿ ಹಲ್ಲರೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಣ್ಣು ಬಳಿದು ಅಪಮಾನ ಮಾಡಿರುವುದನ್ನು ರೈತ ಸಂಘವು ತೀವ್ರವಾಗಿ ಖಂಡಿಸುತ್ತದೆ. ಕಳೆದ ವರ್ಷದಲ್ಲಿ ನಾಮಫಲಕ ಅಳವಡಿಸುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿತ್ತು. ಇಷ್ಟಾದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ. ಚಾರಿತ್ರಿಕ ನಾಯಕರು ಮತ್ತು ರಾಷ್ಟ್ರ ನಾಯಕರನ್ನು ಒಂದೊಂದು ಜಾತಿಗೆ ಸೀಮಿತ ಮಾಡಿದ್ದಾರೆ.

ಜಾತಿಗಳಿಗೆ ರಾಷ್ಟ್ರ ನಾಯಕರನ್ನು ಸೀಮಿತ ಮಾಡಿ ಯಾವ ಯಾವ ಜಾತಿಯಿಂದ ವೋಟ್ ಬರುತ್ತದೆ ಎಂದು ರಾಜಕಾರಣಿಗಳು ಯೋಚಿಸುತ್ತಿದ್ದಾರೆ. ಅಪಮಾನವನ್ನು ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಕೆಟ್ಟ ಮನಸ್ಥಿತಿ ಇರುವ ವ್ಯಕ್ತಿ ಅಪಮಾನ ಮಾಡಿದ್ದಾನೆ. ಯಾವ ಜಾತಿಯ ವ್ಯಕ್ತಿಯಗಳೇ ಆಗಿರಲಿ ಅಂತಹ ಕಿಡಿಗೇಡಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು. ಯಾರೋ ಅವಿವೇಕಿ ಮಾಡಿದ ತಪ್ಪಿಗೆ ಯಾವುದೇ ಒಂದು ವರ್ಗಗಳ ಮೇಲೆ ದೂರಬಾರದು.

ಬಸವಣ್ಣ, ಅಂಬೇಡ್ಕರ್, ಕನಕದಾಸರು, ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗಳು ಮತ್ತು ಫ್ಲೆಕ್ಸ್ ಗಳಿಗೆ ಪದೇ ಪದೇ ಅಪಮಾನ ಮಾಡುತ್ತಿರುವುದು ನಡೆಯುತ್ತಿದೆ. ಸಮಾಜದ ಶಾಂತಿಯನ್ನು ಕದಡುವ ಹುನ್ನಾರ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಯಾವುದೇ ಗ್ರಾಮಗಳಿಗೂ ಪೊಲೀಸರು ಗಸ್ತು ಹೋಗುತ್ತಿಲ್ಲ. ಇದರಿಂದ ಇಂತಹ ಪ್ರಕರಣಗಳು ತಾಲ್ಲೂಕಿನಲ್ಲಿ ನಡೆಯುತ್ತಿವೆ. ಒಂದೊಂದು ವರ್ಗವನ್ನು ಎತ್ತಿ ಕಟ್ಟಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಜಿಲ್ಲಾ ಮತ್ತು ತಾಲ್ಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಶಿವಣ್ಣ, ಕೃಷ್ಣಾಪುರ ಮೋಹನ್ ಹಾಜರಿದ್ದರು.