ನಂಜನಗೂಡು: ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿರುವ ಬಡ ಜನರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ನಮ್ಮ ಪೂರ್ವಜರು ನಮ್ಮ ಗ್ರಾಮದಿಂದ ಅರ್ಧ ಕಿಲೋಮೀಟರ್ ಕಿಟ್ಟಯ್ಯನ ಹುಂಡಿಯಲ್ಲಿ ವಾಸ ಮಾಡುತ್ತಿದ್ದರು, ಕಾಲಕ್ರಮೇಣ ದಬ್ಬಾಳಿಕೆ ದೌರ್ಜನ್ಯದಿಂದ, ನಲುಗಿ ಹೋಗಿ ಮೂರು ಎಕರೆ 30 ಗುಂಟೆ ಜಾಗವನ್ನು ಉಳ್ಳವರು ಅಕ್ರಮವಾಗಿ ವಶ ಪಡಿಸಿಕೊಂಡಿದ್ದು, ಮರಳಿ ನಮ್ಮ ಗ್ರಾಮಕ್ಕೆ ಬಿಡಿಸಿ ಕೊಡಬೇಕು.
ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜನಾಂಗ, ಉಪ್ಪಾರ ಸಮುದಾಯದವರು, ಗೆಜ್ಜಗಾರ ಸಮುದಾಯದವರು, ಕುಂಬಾರ ಸಮುದಾಯದವರು ವಾಸ ಮಾಡುತ್ತಿದ್ದು, ಬಡ ಜನರಿಗೆ ಈ ಸ್ಥಳದಲ್ಲಿ ನಿವೇಶನವನ್ನು ಹಂಚಿಕೊಡುಬೇಕು.

ಕಳೆದ 30 ವರ್ಷಗಳ ಹಿಂದೆ ಹೊಸಹಳ್ಳಿ ಗ್ರಾಮದ ಮೂಲಕ (ಕುಂಬಳ್ಳಿ ) ಇಂದಿನ ಶಂಕರಪುರ ನಂಜನಗೂಡು ಟೌನ್ ಸಂಪರ್ಕಿಸುವ ರಸ್ತೆಯನ್ನು ನಂಜನಗೂಡಿನ ಉದ್ಯಮಿ ಇಟ್ಟಿಗೆ ಗೂಡು ಕೃಷ್ಣಪ್ಪ ಎಂಬುವರು ಮುಳ್ಳು ತಂತಿಯನ್ನು ಹಾಕಿಕೊಂಡು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿಯನ್ನು ಕೂಡಲೆ ತೆರವುಗೊಳಿಸಿ, ರಸ್ತೆಯನ್ನು ಬಿಡಿಸಿಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂಜನಗೂಡು ತಾಲೂಕಿನ ಮೈಸೂರು ಜಿಲ್ಲಾ ಕಾಂಗ್ರೆಸ್ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಎಚ್ ಆರ್ ಲೋಕೇಶ್, ಬಿಎಸ್ಪಿ ಅಧ್ಯಕ್ಷ ಎಚ್ ಆರ್ ಪುರುಷನಾಥ್, ಯುವ ಕಾಂಗ್ರೆಸ್ ಮುಖಂಡ ಎಚ್.ಎಂ ಚೆಲುವಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

