ಮೈಸೂರು : ಜಿಲ್ಲೆಯ ಸರಗೂರು ತಾಲ್ಲೂಕಿನ ಹಾದನೂರು, ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ 152 ಕುಟುಂಬಗಳಿಗೆ ಪುರ್ನವಸತಿ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಸರಗೂರು ತಾಲ್ಲೂಕು ಶಾಖೆಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸರಗೂರು ಹೋಬಳಿ ಲಕ್ಷಣಾಪುರ ಸರ್ವೇ ನಂ.30, 32ರಲ್ಲಿನ 726.5 ಎಕರೆ, ಅಳಲಹಳ್ಳಿ ಸರ್ವೇ ನಂ.10ರಲ್ಲಿರುವ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುತ್ತಿದ್ದ 152 ಬಡ ಕುಟುಂಬಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಕಾಡಿನಿಂದ ಹೊರತಂದು ಪುನರ್ ವಸತಿ ಕಲ್ಪಿಸದೇ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದ ಒಕ್ಕೂಟದ ಪದಾಧಿಕಾರಿಗಳು ಸರಕಾರದ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ತಾಲೂಕು ಅಧ್ಯಕ್ಷ ಯಶವಂತಪುರ ಡಿ.ನಾಗರಾಜು ಮಾತನಾಡಿ, ಅರಣ್ಯ, ಕಂದಾಯ ಇಲಾಖೆ ಸಮ್ಮುಖದಲ್ಲಿ ಈಗಾಗಲೇ ಒಂದು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದು, ಸರ್ವೇ ನಡೆಸಿದ್ದಾರೆ. ಈ ಕುರಿತು ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ.
ಆದರೆ, ಅಧಿಕಾರಿಗಳು ಪುನರ್ ವಸತಿ ಕಲ್ಪಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಈ ಕೂಡಲೇ ಜಂಟಿ ಸರ್ವೇ ನಡೆಸಿ, ನೊಂದ ಜನರಿಗೆ ಭೂಮಿ, ಪುನರ್ ವಸತಿ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

