ಮೈಸೂರು: ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ. ಗೀತಾಮೃತ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೇಶವಮೂರ್ತಿ ಎಂಬುವರು ಹಲ್ಲೆಗೆ ಒಳಗಾದವರು. ಮಂಡ್ಯ ಜಿಲ್ಲೆ ಸಬ್ಬನಗುಪ್ಪೆ ಗ್ರಾಮದ ಶ್ರೀಧರ್ ಆರಾಧ್ಯ ಹಲ್ಲೆ ನಡೆಸಿದವರು.

ಪುರೋಹಿತ್ಯ ಮಾಡುವ ಕೇಶವಮೂರ್ತಿ ರವರು ಗೀತಾಮೃತ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿ ಗೋಶಾಲೆ,ವೇದಶಾಲೆ,ದೇವಸ್ಥಾನ ನಿರ್ಮಾಣ ಸೇರಿದಂತೆ ಸಮಾಜ ಸೇವೆ ಮಾಡುವ ಉದ್ದೇಶ ಹೊಂದಿದವರು. ಪುರೋಹಿತ್ಯಕ್ಕಾಗಿ ಸಬ್ಬಕುಪ್ಪೆ ಗ್ರಾಮದ ಶ್ರೀಧರ್ ಆರಾಧ್ಯ ಪರಿಚಯವಾಗಿದೆ. ಆಗಾಗ ಪೂಜೆಗಳನ್ನ ಮಾಡಿಸುತ್ತಾ ಕೇಶವಮೂರ್ತಿ ರವರನ್ನ ಪರಿಚಯಿಸಿಕೊಂಡಿದ್ದಾರೆ.

ನಂತರ ಶ್ರೀಧರ್ ಆರಾಧ್ಯ ಗೀತಾಮೃತ ಟ್ರಸ್ಟ್ ಗೆ 10 ಲಕ್ಷ ಹಣ ಪಾವತಿಸಿದ್ದಾರೆ. ಎರಡು ದಿನಗಳ ನಂತರ ಬಂದು ಹಣ ಹಿಂದಿರುಗಿಸುವಂತೆ ದುಂಬಾಲು ಬಿದ್ದಿದ್ದಾರೆ. ಶ್ರೀಧರ್ ಆರಾಧ್ಯ ಒತ್ತಡಕ್ಕೆ ಮಣಿದು ಟ್ರಸ್ಟ್ ಗೆ ಪಾವತಿಯಾದ ಹಣದಲ್ಲಿ 5 ಲಕ್ಷ ಎಸ್.ವಿ.ಪಿ.ಎಂಟರ್ ಪ್ರೈಸಸ್ ಎಂಬ ಸಂಸ್ಥೆಗೆ ಹಣ ಹಿಂದಿರುಗಿಸಿದ್ದಾರೆ. ನಂತರ ಉಳಿದ 5 ಲಕ್ಷ ಹಣವನ್ನೂ ಸಹ ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.

ದೇಣಿಗೆಯಾಗಿ ಬಂದ ಹಣ ಹಿಂದಿರುಗಿಸುವಂತಿಲ್ಲ ಎಂದರೂ ಬಿಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣಕ್ಕಾಗಿ ಒತ್ತಡ ಹೇರಿದ್ದಾರೆ. ಈ ಸಂಭಂಧ ಕೇಶವಮೂರ್ತಿ ರವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್.ದಾಖಲಿಸಿದ್ದಾರೆ. ಪೊಲೀಸರು ಶ್ರೀಧರ್ ಆರಾಧ್ಯರನ್ನ ಕರೆಸಿ ಎಚ್ಚರಿಕೆ ಕೊಟ್ಟಿದ್ದರು. ಹೀಗಿದ್ದರೂ ಮತ್ತೆ ಮತ್ತೆ ಶ್ರೀಧರ್ ಆರಾಧ್ಯ ಹಣಕ್ಕಾಗಿ ಟಾರ್ಚರ್ ನೀಡಿ ನಿನ್ನ ಹೆಂಡತಿಯನ್ನ ನನ್ನ ಜೊತೆ ಮಲಗಿಸು ಎಂಬ ಕೆಟ್ಟ ಪದಗಳನ್ನ ಬಳಸಿದ್ದಾರೆ.

ಮೈಸೂರಿನ ಚಾಮುಂಡಿಪುರಂನ ಎಸ್.ಬಿ.ಐ. ಬ್ಯಾಂಕ್ ಗೆ ಕೇಶ್ವಮೂರ್ತಿ ಬಂದಾಗ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಲ್ಲಿದ್ದ ಕೀಯಿಂದ ಮೂಗಿಗೆ ಗುದ್ದಿಗಾಯಗೊಳಿಸಿದ್ದಾರೆ. ಹಲ್ಲೆಗೊಳಗಾದ ಕೇಶವಮೂರ್ತಿ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಶ್ರೀಧರ್ ಆರಾಧ್ಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.