ನಂಜನಗೂಡು: ನಂಜನಗೂಡು ತಾಲ್ಲೂಕಿನ ಬಂಕಹಳ್ಳಿ ಗ್ರಾಮದಲ್ಲಿ ಶಿವಲಿಂಗ ಮತ್ತು ನಂದಿ ಬಸವ ಪತ್ತೆಯಾಗಿದ್ದು, ನಂಜನಗೂಡಿನ ಮಾಜಿ ಶಾಸಕ ಬಿ. ಹರ್ಷವರ್ಧನ್ ಶಿವಲಿಂಗದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಬಂಕಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಚಾರದಲ್ಲಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸ್ಥಳ ಪರಿಶೀಲನೆಗೆ ಮಾಜಿ ಶಾಸಕ ಬಿ. ಹರ್ಷವರ್ಧನ್ ಭೇಟಿ ನೀಡಿದ್ದರು. ಈ ವೇಳೆ ಸರ್ಕಾರಿ ಜಾಗ ಒತ್ತುವರಿ ಆಗಿರುವ ಸ್ಥಳದಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಕೃಷಿ ಜಮೀನಿನೊಂದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿದೆ.

14-15ನೇ ಶತಮಾನದ ಶಿವಲಿಂಗ ಮತ್ತು ನಂದಿ ಬಸವ ಪುರಾತನ ಕಾಲಕ್ಕೆ ಸೇರಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಶಿವಲಿಂಗದ ಮೇಲೆ ಪೆಟ್ಟು ಬಿದ್ದಿರುವ ಗುರುತುಗಳಿದ್ದು, ಪಕ್ಕದಲ್ಲಿ ಕಲ್ಲಿನ ನಂದಿ ಬಸವನ ತಲೆ ಭಾಗವು ಮುರಿದು ಬಿದ್ದಿದೆ. ಅಲ್ಲದೆ ಪಕ್ಕದಲ್ಲಿ ಮುರಿದು ಬಿದ್ದಿರುವ ಶಿವಲಿಂಗದ ಕಲ್ಲುಗಳು ಕಾಣಸಿಗುತ್ತಿವೆ.

ಪುರಾತನ ಕಾಲದಲ್ಲಿ ಈ ಸ್ಥಳದಲ್ಲಿ ದೇವಾಲಯ ಇರಬಹುದೆಂದು ಶಂಕೆ ವ್ಯಕ್ತವಾಗಿದೆ. ದೇವಾಲಯದ ಗರ್ಭಗುಡಿಯೂ ಇದಾಗಿದ್ದು, ದೇವಾಲಯವನ್ನು ಧ್ವಂಸ ಮಾಡಲಾಗಿದೆ, ಪುರಾತನ ಕಾಲದ ದೇಗುಲವನ್ನು ಮುಚ್ಚಿಹಾಕಿ ಜಮೀನು ಮಾಡಿಕೊಂಡು ಬೆಳೆ ಬೆಳೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಹಾಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿದ್ದು, ಮಧ್ಯದಲ್ಲಿ ಶಿವಲಿಂಗ ಮತ್ತು ಬಸವ ಇದೆ.

ಈ ಹಿಂದೆ ಇದೇ ಸ್ಥಳದಲ್ಲಿ ಗ್ರಾಮದಲ್ಲಿ ವಿವಾಹವಾದರೆ ನವದಂಪತಿಗಳಿಗೆ ಹೂವಿನ ಮಾಲಾರ್ಪಣೆ ಮಾಡಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದೆವು. ಪೂಜೆ ಪುನಸ್ಕಾರ ಮಾಡುತ್ತಿದ್ದೆವು. ಆದರೆ, ಶಿವಲಿಂಗ ಇರುವ ಬಗ್ಗೆ ನಮಗೆ ತಿಳಿದಿರಲಿಲ್ಲ. ಈ ಸ್ಥಳದಲ್ಲಿ ಬಸವೇಶ್ವರ ಮತ್ತು ಮಹದೇಶ್ವರ ದೇವರಿಗೆ ಪೂಜೆ ಮಾಡಲಾಗುತ್ತಿತ್ತು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಕಂದಾಯ ಇಲಾಖೆ, ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಶಿವಲಿಂಗವನ್ನು ಸಂರಕ್ಷಣೆ ಮಾಡಿ, ದೇಗುಲ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶಿವಲಿಂಗವು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಲು ಮುಂದಾಗಿದ್ದಾರೆ.