ಮೈಸೂರು: ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಅಳವಡಿಸಲಾದ ವಾಣಿಜ್ಯ ಜಾಹಿರಾತು ಕಮಾನು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಫುಟ್ ಪಾತ್ ನಿಂದ ಮತ್ತೊಂದು ಬದಿಯ ಫುಟ್ ಪಾತ್ ಸೇರಿದಂತೆ ಅಳವಡಿಸಲಾದ ಕಮಾನು ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಪರಿಸ್ಥಿತಿಗೆ ತಲುಪಿದೆ.
ಸಂಚಾರ ಹೆಚ್ಚಾಗಿ ಇರುವ ರಸ್ತೆ ಮೇಲೆ ಅಳವಡಿಸಿರುವ ಜಾಹಿರಾತು ಕಮಾನು ವಾಹನಗಳ ಮೇಲೆ ಬಿದ್ದರೆ ಹೊಣೆ ಯಾರು..? ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿ. ದಸರಾ ದೀಪಾಲಂಕಾರ ವೇಳೆಯಲ್ಲಿ ಅಳವಡಿಸಿರುವ ಕಮಾನು ಇದು. ಕಬ್ಬಿಣದ ಸರಳುಗಳಿಂದ ನಿರ್ಮಿಸಲಾಗಿದೆ.ಫುಟ್ ಪಾತ್ ಮೇಲೆ ಅಳವಡಿಸಲಾಗಿದ್ದು ಬುಡಸಮೇತ ಕಿತ್ತುಬರುವ ಸಾಧ್ಯತೆ ಇದೆ.
ಈಗಾಗಲೇ ಒಂದು ಪಕ್ಕಕ್ಕೆ ಬಾಗಿದೆ. ವಾಹನಗಳ ಮೇಲೆ ಬಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರುವುಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಬೇಕಿದೆ. ಇಲ್ಲದಿದ್ದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸಂಘಟನಕಾರರು ಎಚ್ಚರಿಸಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಜಾಣಕುರುಡು ಪ್ರದರ್ಶಿಸುತ್ತಿರುವ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ…?.

