ಮೈಸೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣ ಹಿನ್ನಲೆಯಲ್ಲಿ ಮೈಸೂರು ತಾಲ್ಲೂಕಿನ ವಾಜಮಂಗಲ ಗ್ರಾಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಗ್ರಾಮದ ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿದರು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ನನಗೆ ತುಂಬಾ ನೋವು ಉಂಟಾಗಿದೆ. ನಾನು ಶಾಸಕನಾಗಿದ್ದೇನೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರೇ ಮೂಲ ಕಾರಣ. ನಮ್ಮ ತಂದೆ ಧ್ರುವನಾರಾಯಣ್ ರವರು ಈ ಕ್ಷೇತ್ರದಲ್ಲಿ ಸಂಸದರಾಗಿದ್ದರು.

ಸಂವಿಧಾನದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ವಿಶ್ವ ನಾಯಕನಿಗೆ ಅಪಮಾನ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಎಸ್ಪಿ ಅವರ ಜೊತೆ ಮಾತನಾಡಿದ್ದೇನೆ, ಆರು ತಂಡಗಳನ್ನು ರಚನೆ ಮಾಡಿದ್ದಾರೆ. ತನಿಖೆಗೆ ಗ್ರಾಮಸ್ಥರು ಸಹಕಾರ ನೀಡಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.

ಇದೇ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದರಾದ ಸುನಿಲ್ ಬೋಸ್ ಮತ್ತು ವಿಧಾನಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ರವರ ಜೊತೆ ಮಾತನಾಡಿ, ಈ ಪ್ರಕರಣವನ್ನು ಸಿಐಡಿ ಅಥವಾ ಎಸ್ಐಟಿಗೆ ವಹಿಸಿ ತನಿಖೆಯನ್ನು ನಡೆಸುವಂತೆ ಮಾತನಾಡುತ್ತೇನೆ. ನಮ್ಮ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳುತ್ತದೆ. ಬಾಬಾ ಸಾಹೇಬರಿಗೆ ಅಪಮಾನ ಮಾಡಿದರೆ ನಾವು ಸಹಿಸುವುದಿಲ್ಲ. ನಿಮ್ಮ ಶಕ್ತಿಯಾಗಿ ನಿಮ್ಮ ಧ್ವನಿಯಾಗಿ ಸದಾ ಇರುತ್ತೇವೆ ಭಯಪಡಬೇಡಿ, ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.

ನಂತರ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ನಮ್ಮ ತಾಳ್ಮೆಗೂ ಇತಿಮಿತಿ ಇರುತ್ತದೆ. ಆಗ ನಾವು ಸರ್ಕಾರವನ್ನು ನೋಡುವುದಿಲ್ಲ ಮಂತ್ರಿ ಶಾಸಕರನ್ನು ನೋಡುವುದಿಲ್ಲ. ಅನಿವಾರ್ಯ ಬೀದಿಗೆ ಇಳಿಯುತ್ತೇವೆ ಇದಕ್ಕೆ ಅವಕಾಶ ಮಾಡಿಕೊಡಬೇಡಿ.

ಸಿಎಂ ಕ್ಷೇತ್ರದಲ್ಲಿ ಹೆಚ್ಚು ಹೊತ್ತು ಕೊಡಬೇಕು. ವಾಜಮಂಗಲ ಗ್ರಾಮಕ್ಕೆ ಮಾತ್ರ ಅಪಮಾನ ಆಗಿಲ್ಲ. ಎಲ್ಲರಿಗೂ ಅವಮಾನವಾಗಿದೆ. ಈ ಕೂಡಲೇ ಸಿಐಡಿ ಅಥವಾ ಎಸ್ಐಟಿಗೆ ವಹಿಸಬೇಕು. ನುರಿತ ಪೊಲೀಸ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಬೇಕು. ಈ ಪ್ರಕರಣದಿಂದ ಗ್ರಾಮದಲ್ಲಿ ಸಾವಿನ ಸೂತಕದ ಛಾಯೆ ಆವರಿಸಿದೆ. ಎಲ್ಲಿಯೂ ಕೂಡ ಅಂಬೇಡ್ಕರ್ ಅವರ ಜಯಂತಿಯನ್ನು ಸಂತೋಷದಿಂದ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಸಿಂಧುವಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಯಿತು.

ಇನ್ನೂ ಕೂಡ ಕಿಡಿಗೇಡಿಗಳನ್ನು ಬಂಧಿಸಿಲ್ಲ. ಇಂತಹ ಪ್ರಕರಣಗಳು ನಡೆದಾಗ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಿದ್ದಾರೆ. ಇಂತಹ ಅಪಮಾನಗಳು ನಡೆಯುತ್ತಿರಲಿಲ್ಲ. ಇದರಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷವೇ ಕಾರಣ. ಬಾಬಾ ಸಾಹೇಬರಿಗೆ ಅಪಮಾನವಾದರೆ ನಾವು ಸಹಿಸುವುದಿಲ್ಲ. ಪ್ರತಿಭಟನೆಗೆ ಇಳಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಆರೋಪಿಗಳನ್ನು ಪತ್ತೆ ಹಚ್ಚಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವರುಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಯರಹುಂಡಿ ರವಿ, ವಾಜಮಂಗಲ ಗ್ರಾಪಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಮಾಜಿ ತಾ.ಪಂ ಸದಸ್ಯ ಸುರೇಶ್, ಗ್ರಾ.ಪಂ ಸದಸ್ಯರಾದ ರಾಜಣ್ಣ, ಶಿವು, ತಾ.ಪಂ ಮಾಜಿ ಸದಸ್ಯ ಮಂಜುನಾಥ್, ಸಿದ್ದಾರ್ಥ ಯುವಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಮಾಜಿ ಗ್ರಾಪಂ ಸದಸ್ಯ ಚಿನ್ನಸ್ವಾಮಿ, ರವಿಕುಮಾರ್, ಮುಖಂಡರಾದ ತಗಡೂರು ಗಾರ್ಡನ್ ಮಹೇಶ್, ಬದನವಾಳು ಸೋಮಣ್ಣ, ಭೀಮರಾಯ, ರವಿ ಭುಗತಗಳ್ಳಿ, ಸುನೀಲ್ ಆಯರಹಳ್ಳಿ, ಗ್ರಾಮದ ಯಜಮಾನರಾದ ಅಂಕಪ್ಪ, ಪುಟ್ಟಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.