ನಂಜನಗೂಡು: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗುತ್ತದೆ ಇದನ್ನು ತಡೆಗಟ್ಟಲು ಸಂಘಟನೆ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಹೇಳಿದರು.
ನಂಜನಗೂಡು ತಾಲ್ಲೂಕಿನ ಬ್ಯಾಳಾರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇವರ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ದಲಿತರ ಬೀದಿಗಳಲ್ಲಿ ಹಬ್ಬ ಹರಿ ದಿನಗಳು, ಜಾತ್ರೆಗಳು ಹೆಚ್ಚಾಗಿ ನಡೆಯುತ್ತಿವೆ.
ಇದರಿಂದ ಕೋಮುವಾದ ಮನೆ ಮನಗಳಿಗೆ ಹೋಗುತ್ತಿದೆ. ಬಾಬಾ ಸಾಹೇಬರು ಹೇಳಿರುವ ಹಾಗೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ವೈಚಾರಿಕ ಮನೋಭಾವನೆಯನ್ನು ಬೆಳೆಸಬೇಕು. ಆದರೆ ಮೂಢನಂಬಿಕೆ ಕಡೆ ನಾವು ಸಾಗುತ್ತಿದ್ದೇವೆ. ಅಂಬೇಡ್ಕರ್ ಅವರಿಗೆ ನಾವು ದ್ರೋಹ ಮಾಡುತ್ತಿದ್ದೇವೆ. ನಾವು ಇಂದು ಬದುಕುತ್ತಿರುವ ಹೈಟೆಕ್ ಜೀವನ ಅಂಬೇಡ್ಕರ್ ಅವರ ಶ್ರಮ ಮತ್ತು ಅವರ ಮಕ್ಕಳ ಸಮಾಧಿಗಳ ಮೇಲೆ ನಾವು ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದೇವೆ ಹೊರತು ನಮ್ಮ ಶ್ರಮದಿಂದಲ್ಲ.
ಅಂಬೇಡ್ಕರ್ ರವರ ಋಣದಲ್ಲಿ ಪ್ರತಿಯೊಂದು ಸಮಾಜವು ಬದುಕುತ್ತಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿದ್ದರು ಶೋಷಿತರಿಗೆ ಉದ್ಯೋಗ, ಶಿಕ್ಷಣ ಗುಣಮಟ್ಟ ಸುಧಾರಣೆ ಕಂಡಿಲ್ಲ. ಈ ದೇಶದ ಸಂವಿಧಾನವನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮೂರ್ತಿಗಳಿಂದ ಅಂಬೇಡ್ಕರ್ ಅವರು ಜೀವಂತವಾಗಿದ್ದಾರೆ. ನಮಗೆ ಅವರು ಸ್ಪೂರ್ತಿಯಾಗಬೇಕು ಎಂದು ತಿಳಿಸಿದರು.
ನಂತರ ದಸಂಸ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಮಾತನಾಡಿ, ಅಂಬೇಡ್ಕರ್ ಅವರ ಹೆಸರು ಹೇಳುವುದೇ ರೋಮಾಂಚನ ಉಂಟು ಮಾಡುತ್ತದೆ. ಸಮಾನತೆ ದೃಷ್ಟಿಯಲ್ಲಿ ಸಂವಿಧಾನ ರಚಿಸಿದ ಮಹಾನ್ ಚೇತನ. ನಾವೆಲ್ಲರೂ ಜೀವನದಲ್ಲಿ ಅವರ ಚಿಂತನೆ ಅಳವಡಿಸಿಕೊಳ್ಳಬೇಕಿದೆ.ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ಧ್ಯೇಯ, ತತ್ವವೇ ಅಂಬೇಡ್ಕರ್ ಆಗಿದ್ದಾರೆ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಹೇಳಿದರು. ಇನ್ನೂ ದಸಂಸ ಅಂಬೇಡ್ಕರ್ ವಾದ ಸಂಘಟನೆಗೆ ನೊಂದಣಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಉಪವಿಭಾಗೀಯ ಸಂಚಾಲಕ ಸಿದ್ದರಾಜು, ಕ್ರಾಂತಿಕಾರಿ ಹೋರಾಟಗಾರ ಮೂಡಹಳ್ಳಿ ಪ್ರಸಾದ್, ಮಲ್ಲಹಳ್ಳಿ ಆದರ್ಶ್, ಬಸವಟ್ಟಿಗೆ ಕೃಷ್ಣಮೂರ್ತಿ, ಹೂವಯ್ಯ, ಸುರೇಶ್, ಬ್ಯಾಳಾರು ಆನಂದ್, ಅನಿಲ್, ನಾರಾಯಣ ಸ್ವಾಮಿ, ಬಸವರಾಜು, ಶಾಂತಮ್ಮ, ಕಾವೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

