ನಂಜನಗೂಡು: ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ನಿಂದ ಕೋಟ್ಯಂತರ ಹಣ ವಂಚಿಸಿರುವ ಆರೋಪದ ಹಿನ್ನಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ನಿಂದ ವಂಚನೆ ಮಾಡಿರುವುದಾಗಿ ಸದಸ್ಯರು ಆರೋಪ ಮಾಡಿದ್ದಾರೆ.

ನಂಜನಗೂಡು ಪಟ್ಟಣದ ಹಂಡುವಿನಹಳ್ಳಿ ಬಡಾವಣೆಯ ಮೂಡ ಲೇಔಟ್ ನಲ್ಲಿದ್ದ ಕಚೇರಿಗೆ ಬೀಗ ಜಡಿದಿರುವ ಪಾಲುದಾರರು ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ. ಪಿಗ್ಮಿ ರೂಪದಲ್ಲಿ ಪ್ರತಿದಿನ ಸದಸ್ಯರು ಉಳಿತಾಯ ಮಾಡುತ್ತಿದ್ದರು ಎನ್ನಲಾಗಿದೆ. ಸಿಂಧುವಳ್ಳಿ ಗ್ರಾಮದ ಹರೀಶ್ ರಾವ್, ನಾಗಚಂದ್ರ ರಾಜೇ ಅರಸ್, ಚಂದ್ರ ರಾವ್,

ಹುಣಸೂರು ತಾಲ್ಲೂಕಿನ ಸೋಮಹಳ್ಳಿ ಗ್ರಾಮದ ವಿನೋದ್ ರಾವ್, ಪಿರಿಯಾಪಟ್ಟಣ ತಾಲೂಕಿನ ತಾತನಹಳ್ಳಿ ಗ್ರಾಮದ ಮಹೇಶ್, ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದ ಕಿರಣ್ ರಾವ್ ಎಂಬುವವರ ಮಾಲಿಕತ್ವದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪ್ರಧಾನ ಕಛೇರಿ ಕೂಡ ಕಾರ್ಯ ನಿರ್ವಹಿಸುತ್ತಿತ್ತು. ಎಂಬುದನ್ನು ಮೋಸ ಹೋದವರು ಮಾಹಿತಿ ನೀಡಿದ್ದಾರೆ.

ಅದರಂತೆ ನಂಜನಗೂಡು, ಅರಸೀಕೆರೆ, ಬೇಲೂರು, ಅರಕಲಗೂಡು, ಆಲೂರು, ಕೆ ಆರ್ ನಗರ, ಮೈಸೂರು, ತಿಪಟೂರು, ಕೊಳ್ಳೇಗಾಲ, ಹಾಸನ, ಹೊಳೆನರಸೀಪುರಗಳಲ್ಲಿ ಶಾಖೆಗಳನ್ನು ತೆರೆದು ಕೋಟ್ಯಾಂತರ ರೂ. ಹಣವನ್ನು ವಂಚಿಸಿದ್ದಾರೆ. ಪ್ರತಿದಿನ 100 ರಿಂದ ಪ್ರಾರಂಭಗೊಂಡು 500 ರವರೆಗೆ ಜನರು ಉಳಿತಾಯ ಮಾಡಿ ಪುಸ್ತಕಗಳಲ್ಲಿ ಬರೆದುಕೊಂಡು ಚೀಟಿಯನ್ನು ಸಹ ನೀಡಿದ್ದಾರೆ. ಕೆಲವು ವರ್ಷಗಳವರೆಗೆ ಕಟ್ಟಿದ್ದ ಹಣಕ್ಕೆ ಬಡ್ಡಿಯನ್ನು ಸಹ ನೀಡಿ ಜನರ ನಂಬಿಕೆಯನ್ನು ಗಳಿಸಿದ್ದರು.

ಅದರಂತೆ ಜನರು ಪ್ರತಿವರ್ಷ ಇನ್ನು ಹೆಚ್ಚಿನ ಹಣವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಕಂಪನಿಗೆ ಹಣವನ್ನು ಕಟ್ಟುತ್ತಿದ್ದರು. ಕೆಲವರು 2 ಲಕ್ಷಕ್ಕೂ ಅಧಿಕ ಮೊತ್ತವನ್ನು ಉಳಿತಾಯ ಮಾಡಿರುವ ಬಗ್ಗೆ ಪುಸ್ತಕದಲ್ಲಿ ನಮೂದು ಮಾಡಿದ್ದಾರೆ. ಆದರೆ, ಕೆಲವು ದಿನಗಳಿಂದ ಹಣ ಕಟ್ಟಿಸಿಕೊಳ್ಳಲು ಕಂಪನಿಯ ನೌಕರರು ಗ್ರಾಮಕ್ಕೆ ಬಾರದ ಹಿನ್ನೆಲೆ ಅನುಮಾನ ವ್ಯಕ್ತಪಡಿಸಿ ನಂಜನಗೂಡು ಕಚೇರಿಗೆ ಬಂದು ನೋಡಿದಾಗ ಕಚೇರಿ ಬಾಗಿಲು ಹಾಕಿತ್ತು.

ಇನ್ನು ಕೆಲವರು ಮುಂದೆ ಹೋಗಿ ಹಾಸನ ಜಿಲ್ಲೆಯ ಅರಸೀಕೆರೆ ಪ್ರಧಾನ ಕಚೇರಿಗೂ ತೆರಳಿದಾಗ ಅಲ್ಲಿಯೂ ಇದೆ ಸ್ಥಿತಿ ಉಂಟಾಗಿದ್ದನ್ನು ಗಮನಿಸಿ, ಅಲ್ಲಿಯ ಸ್ಥಳೀಯರನ್ನು ವಿಚಾರಿಸಿದಾಗ ಈ ಭಾಗದಲ್ಲೂ ಇದೇ ವಂಚನೆಯಾಗಿದೆ ಎಂದು ತಿಳಿದು ಬಂದಿದೆ. ಮೋಸ ಹೋದ ಜನರು, ಹೀಗೆ ತಾಲ್ಲೂಕಿನ ಗ್ರಾಮಗಳ 50ಕ್ಕೂ ಹೆಚ್ಚು ಮಂದಿ ನಂಜನಗೂಡು ಪಟ್ಟಣ ಠಾಣೆಗೆ ಆಗಮಿಸಿ ,

ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಕಳೆದುಕೊಂಡಿರುವ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಹಾಗೆ ಠಾಣಾ ಪೊಲೀಸರು ಪಿಗ್ಮಿ ವಸೂಲು ಮಾಡುತ್ತಿದ್ದ ಮೂವರು ನೌಕರರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.