ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮತ್ತೆ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಕೇವಲ 14 ಸಾವಿರಕ್ಕೆ ಹೆಣ್ಣುಮಗು ಮಾರಾಟ ಮಾಡಲಾಗಿದೆ. ಮಗು ಮಾರಾಟ ಬೆಳಕಿಗೆ ಬಂದರೂ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲೇ ಘಟನೆ ನಡೆದರೂ ಪೊಲೀಸರು ಲೆಕ್ಕಕ್ಕೇ ಇಲ್ಲವೆಂಬಂತೆ ವರ್ತಿಸಿರುವುದಕ್ಕೆ ಅನುಮಾನಕ್ಕೆ ಕಾರಣವಾಗಿದೆ.

ನಂಜನಗೂಡಿನ ನೀಲಕಂಠನಗರದ ಅನಿಲ್ ಕುಮಾರ್ ಹಾಗೂ ಸೌಮ್ಯ ಎಂಬ ದಂಪತಿಗೆ ಸೇರಿದ ಮಗುವನ್ನು ಮಾರಾಟ ಮಾಡಿರುವ ಆರೋಪ ಇದಾಗಿದೆ. ದಂಪತಿಗೆ ಹುಟ್ಟಿದ ಮೂರು ಮಕ್ಕಳೂ ಹೆಣ್ಣಾದ ಕಾರಣ ಮೂರನೇ ಮಗು ಅಮೂಲ್ಯಳನ್ನ ಮಾರಾಟ ಮಾಡಲಾಗಿದೆ. ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.

ಮಗು ಮಾರಾಟ ಆಗಿದೆ ಎಂಬ ಮಾಹಿತಿಯೊಂದು ಅಂಗನವಾಡಿ ಕಾರ್ಯಕರ್ತೆ ಲಾವಣ್ಯ ಎಂಬುವರಿಗೆ ದೂರು ಬಂದಿದೆ. ಕೂಡಲೇ ಲಾವಣ್ಯ ರವರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ಮುಟ್ಟಿಸಿದ್ದಾರೆ. ನಂತರ ಸ್ಥಳೀಯ ಮುಖಂಡರಾದ ಅನಂತ್ ರವರಿಗೆ ತಿಳಿಸಿದ್ದಾರೆ. ಅನಂತ್ ರವರು ಮಗುವನ್ನ ಖರೀದಿಸಿದವರನ್ನ ಸಂಪರ್ಕಿಸಿದಾಗ 14 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ನಮಗೆ ನಮ್ಮ ಹಣ ಕೊಟ್ಟರೆ ಮಗು ಕೊಡುವುದಾಗಿ ತಿಳಿಸಿದ್ದಾರೆ. ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ಹೇಳಿದಾಗ ವಾಪಸ್ ತಂದು ಕೊಟ್ಟಿದ್ದಾರೆ. ಮಗು ವಾಪಸ್ ಬಂದ ನಂತರ ಪೊಲೀಸರು ಎಂಟ್ರಿ ಕೊಟ್ಟು ಮಗುವನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಗುವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಮಗು ಮಾರಾಟ ಮಾಡಿದ ಪ್ರಕರಣ ನಂಜನಗೂಡು ಪಟ್ಟಣ ಪೊಲೀಸರ ಗಮನಕ್ಕೆ ಬಂದು ನೇರವಾಗಿ ಎಂಟ್ರಿ ಕೊಟ್ಟು ಮಗುವನ್ನ ಮೈಸೂರಿನಲ್ಲಿರುವ ಶಿಶುಪಾಲನಾ ಕಚೇರಿ ಅಧಿಕಾರಿಗಳ ವಶಕ್ಕೆ ಕೊಟ್ಟರೂ ಯಾರ ವಿರುದ್ದವೂ ಇದುವರೆಗೆ ಪ್ರಕರಣ ದಾಖಲಿಸಿಲ್ಲ. ಮಗುವನ್ನ ಮಾರಾಟ ಮಾಡಿದವರಾಗಲಿ, ಮಧ್ಯವರ್ತಿಯಾಗಲಿ ಅಥವಾ ಖರೀದಿಸದವರನ್ನಾಗಲಿ ವಶಕ್ಕೆ ಪಡೆದಿಲ್ಲ. ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಆರೋಪಿಗಳನ್ನ ವಾಪಸ್ ಕಳಿಸಿದ್ದಾರೆ. ಇನ್ನಾದರೂ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.