ನಂಜನಗೂಡು: ಕುಡಿಯುವ ನೀರು ಕೇಳಲು ಬಂದ ಸಾರ್ವಜನಿಕರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಹೆಡತಲೆ ಗ್ರಾಮ ಪಂಚಾಯಿತಿ ಪಿಡಿಒ ರಾಜಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಕಳೆದ 15 ದಿನಗಳಿಂದ ತಮ್ಮ ಬೀದಿಗೆ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಎಂದು ಸಮಸ್ಯೆ ತಿಳಿಸಲು ಪಂಚಾಯಿತಿಗೆ ತೆರಳಿದ್ದ ಸಾರ್ವಜನಿಕರೊಂದಿಗೆ ಪಿಡಿಒ ಅನುಚಿತವಾಗಿ ವರ್ತಿಸಿ, ಹಲ್ಲೆಗೆ ಮುಂದಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಘಟನೆ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಮೈಸೂರು ಜಿಪಂ ಸಿಇಒ ಅವರ ಆದೇಶದ ಮೇರೆಗೆ ನಂಜನಗೂಡು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಅವರು ಹೆಡತಲೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.

ಹೆಡತಲೆ ಮತ್ತು ನೇರಳೆ ಎರಡೂ ಗ್ರಾಪಂಗಳಲ್ಲಿ ರಾಜಶೇಖರ್ ಕಾರ್ಯನಿರ್ವಾಹಿಸುತ್ತಿದ್ದು, ಕೂಡಲೇ ಪಿಡಿಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ಸಲ್ಲಿಸಲಾಗಿದೆ ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಅವರ ಸ್ಥಾನಕ್ಕೆ ನೂತನ ಪಿಡಿಒ ಆಗಿ ಶ್ವೇತಾ ಅವರನ್ನು ನೇಮಕ ಮಾಡಿರುವುದಾಗಿ ಮಾಹಿತಿ ನೀಡಿದರು.