ನಂಜನಗೂಡು: ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವುದು ಮಾಹಿತಿ ಕೇಳಿದವರಿಗೆ ಬೆದರಿಕೆ ಹಾಕುವುದು ಎಂಬ ಆರೋಪ ಎದುರಿಸುತ್ತಿರುವ ನಂಜನಗೂಡು ತಾಲ್ಲೂಕು ಕಛೇರಿ ದ್ವಿತೀಯ ದರ್ಜೆ ಸಹಾಯಕ ಕಿರಣ್ ಕುಮಾರ್ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ತಹಶೀಲ್ದಾರ್ ರವರಿಗೆ ಪತ್ರ ಬರೆದು ತಿಂಗಳುಗಳೇ ಉರುಳಿದ್ದರೂ ಕ್ರಮ ಕೈಗೊಂಡಿಲ್ಲವೆಂಬ ಆರೋಪ ಕೇಳಿ ಬಂದಿದೆ.

ಕಿರಣ್ ಕುಮಾರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸಿಂಧುವಳ್ಳಿ ಗ್ರಾಮದ ವೆಂಕಟೇಶ್ ಎಂಬುವರು ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ವೆಂಕಟೇಶ್ ರವರ ಪತ್ರಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ವರದಿ ನೀಡುವಂತೆ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ಗೆ ಪತ್ರ ಬರೆದಿದ್ದಾರೆ.

ಪತ್ರ ಬರೆದು ತಿಂಗಳುಗಳು ಉರುಳಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ವೆಂಕಟೇಶ್ ಆರೋಪಿಸಿದ್ದಾರೆ. ಒಂದೇ ಹುದ್ದೆಯಲ್ಲಿ 5 ವರ್ಷಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡುತ್ತಿದ್ದು ಅಂತಹವರ ವಿರುದ್ದ ದೂರುಗಳು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ. ಆದ್ರೆ ಕಿರಣ್ ಕುಮಾರ್ ಇದೇ ಸ್ಥಳದಲ್ಲಿ 10 ವರ್ಷಕ್ಕೂ ಹೆಚ್ಚು ಅವಧಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ವಿರುದ್ದ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಜಿಲ್ಲಾಧಿಕಾರಿಗಳ ಪತ್ರಕ್ಕೂ ಕ್ಯಾರೆ ಎನ್ನದ ತಹಶೀಲ್ದಾರ್ ನಡೆ ಮೇಲೆ ಅನುಮಾನ ಮೂಡುತ್ತಿದೆ. ಒಬ್ಬ ದ್ವಿತೀಯ ಸಹಾಯಕರು ಇಷ್ಟೊಂದು ಪ್ರಭಾವ ಬೀರುತ್ತಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಕೂಡಲೇ ಆತನ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ದೂರುದಾರ ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.