ಮೈಸೂರು : ಇಂದು ಜಗತ್ಪ್ರಸಿದ್ಧ ಜಂಬೂ ಸವಾರಿಗೆ ಚಾಲನೆ ಸಿಗಲಿದೆ. ನಾಡ ದೇವಿಗೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.  ಪುಷ್ಪಾರ್ಚನೆ ಬಳಿಕ ರಾಜಪಥದಲ್ಲಿ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಸಾಗಲಿದೆ.

ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಸುಮಾರು 5 ಕಿ.ಮೀ. ದೂರ ಅಂಬಾರಿ ಸಾಗಲಿದೆ. ಜಂಬೂ ಸವಾರಿಗೆ ಆಕರ್ಷಕ ಸ್ತಬ್ಧ ಚಿತ್ರಗಳು, ಕಲಾತಂಡಗಳ ಮೆರುಗು ಸಿಗಲಿದೆ. ಮಧ್ಯಾಹ್ನ 1ರಿಂದ 1.18ರ ಶುಭ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ನಂದಿ ಪೂಜೆ ನಡೆಯಲಿದೆ. ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ನಂದಿ ಧ್ವಜಕ್ಕೆ ಸಿಎಂ ಪೂಜೆ ಮಾಡಲಿದ್ದಾರೆ.

ನಂತರ ಕುಂಭ ಲಗ್ನದಲ್ಲಿ ಸಂಜೆ 4.42ರಿಂದ 5.06ರ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿ ಚಾಮುಂಡೇಶ್ವರಿಗೆ ಸಿಎಂ ಪುಷ್ಪಾರ್ಚನೆ  ಮಾಡಲಿದ್ದಾರೆ.  ಈ ವೇಳೆ ರಾಷ್ಟ್ರಗೀತೆ ಮೊಳಗಲಿದೆ.  ಅದೇ ಸಮಯಕ್ಕೆ 21 ಸುತ್ತು ಕುಶಾಲತೋಪು ಸಿಡಿಸುವ ಕಾರ್ಯ ನಡೆಯಲಿದೆ.

6ನೇ ಬಾರಿಗೆ ಅಭಿಮನ್ಯು  ಚಿನ್ನದ ಅಂಬಾರಿ ಹೊರಲಿದೆ. ಅಭಿಮನ್ಯುಗೆ ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾ ಸಾಥ್‌ ನೀಡಲಿದೆ. ಮೆರವಣಿಗೆಯಲ್ಲಿ ನಿಶಾನೆ ಆನೆ ಧನಂಜಯ, ಪಟ್ಟದ ಶ್ರೀಕಂಠ, ನೌಪತ್ ಗೋಪಿ, ಉಳಿದ ಆನೆಗಳು ಸಾಲಾನೆಗಳಾಗಿ ಸಾಗಲಿವೆ.

ಜೊತೆಗೆ 100ಕ್ಕೂ ಹೆಚ್ಚು ಕಲಾ ತಂಡಗಳು, 60ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಹಾಗೂ ಪೊಲೀಸ್ ತುಕಡಿಗಳು ಸಾಗಲಿವೆ. ಜಂಬೂ ಸವಾರಿ ವೀಕ್ಷಣೆಗಾಗಿ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸುಮಾರು 48 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಂಬಾರಿ ಸಾಗುವ ಮಾರ್ಗದ ಉದ್ದಕ್ಕೂ ರಸ್ತೆಯ ಎರಡು ಬದಿಗಳಲ್ಲಿ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7 ಗಂಟೆಗೆ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ನಡೆಯಲಿದೆ.