ಮೈಸೂರು: ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹರಗನಪುರ ಗ್ರಾಮದಲ್ಲಿ ನಡೆದಿದೆ‌‌.

ಹರಗನಪುರ ಗ್ರಾಮದ ರಾಜೇಂದ್ರ ಅವರ ಪುತ್ರ ಗುರುಮೂರ್ತಿ (24) ಮೃತ ದುರ್ದೈವಿ. ಹರಗನಪುರ ಗ್ರಾಮದ ಮೃತ ಗುರುಮೂರ್ತಿ ಮನೆಗೆ ಶ್ರವಣ ಮತ್ತು ಅಭಿ ಸೇರಿದಂತೆ ಐವರು ಯುವಕರು ಬಂದು ಗಲಾಟೆ ಮಾಡಿ ಹೋಗಿದ್ದರು. ಇದರಿಂದ ಮನನೊಂದ ಗುರುಮೂರ್ತಿ, ಚಾಮರಾಜನಗರ ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಕೆರೆಗೆ ಗುರುಮೂರ್ತಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇವತ್ತು ಬೆಳಿಗ್ಗೆ ನಮ್ಮ ಮನೆಯ ಮುಂದೆ ಬಂದು ನಾಲ್ಕು ಜನ ಗಲಾಟೆ ಮಾಡಿ ಅವಮಾನ ಮಾಡಿದ್ದಾರೆ. ಅದೇ ಕಾರಣಕ್ಕೆ ನಾನು ಸಾಯೋದಕ್ಕೆ ಕಾರಣ. ಗಟ್ಟವಾಡಿ ಗ್ರಾಮದ ಶ್ರವಣ, ಅವನ ತಮ್ಮ ಅಭಿ ಇವರುಗಳು ನನ್ನ ಸಾವಿಗೆ ಕಾರಣ. ಇವರನ್ನು ಜೈಲಿಗೆ ಕಳುಹಿಸಬೇಕು, ಜೀವನಪರ್ಯಂತ ಜೈಲಿನಲ್ಲಿ ಇರಬೇಕು. ಗಲ್ಲು ಶಿಕ್ಷೆ ಆಗಬೇಕು, ಬೆಳಿಗ್ಗೆ ನಡೆದ ಗಲಾಟೆಯನ್ನು ಊರಿನ ಜನ ನೋಡಿದ್ದಾರೆ ಅವರೇ ಸಾಕ್ಷಿ. ಆಮೇಲೆ ಗಟ್ಟವಾಡಿಯಲ್ಲಿ ನಮ್ಮ ನಾಗೇಂದ್ರ ದೊಡ್ಡಪ್ಪ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಗುರುಮೂರ್ತಿ ಕೆರೆಗೆ ಹಾರಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಚಾಮರಾಜನಗರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕೆರೆಯಿಂದ ಶವವನ್ನು ಹೊರ ತೆಗೆದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು.

ಗಲಾಟೆ ನಡೆಸಿದ ಗಟ್ಟವಾಡಿ ಗ್ರಾಮದ ಶ್ರವಣ, ಅಭಿ, ಸೋಮಶೇಖರ, ಪ್ರದೀಪ್, ಸೋಮು ಎಂಬ ಯುವಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.