ಮೈಸೂರು : ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಸಂಭವಿಸಿದೆ.
ಮೈಸೂರಿನ ಬಿಎಂ ಹ್ಯಾಬಿಟೆಟ್ ಮಾಲ್ನಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುವಾಗ ಘಟನೆ ನಡೆದಿದೆ. ಸುನೀಲ್ (27) ಮೃತ ದುರ್ದೈವಿ. ಮಾಲ್ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ಗಾಯಗೊಂಡವರನ್ನು ಚಂದ್ರು ಎಂದು ಗುರುತಿಸಲಾಗಿದೆ.
ಸೋಮವಾರ ಮಾಲ್ನ ನಾಲ್ಕನೇ ಮಹಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಬೋರ್ಡ್ವೊಂದನ್ನು ಸುನೀಲ್ ತೆರವು ಮಾಡುತ್ತಿದ್ದರು. ಈ ವೇಳೆ ಗಮನಕ್ಕೆ ಬಾರದೇ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಕುಸಿದಿದ್ದಾರೆ.. ತಕ್ಷಣ ಕೈಗೆ ಸಿಕ್ಕಿದ್ದ ರಾಡ್ವೊಂದನ್ನು ಹಿಡಿದುಕೊಂಡು ನೇತಾಡುತ್ತಿದ್ದರು. ಇದನ್ನು ಗಮನಿಸಿದ ಮತ್ತೋರ್ವ ಕಾರ್ಮಿಕ ಚಂದ್ರು ಸಹಾಯಕ್ಕೆ ಮುಂದಾಗಿದ್ದು, ಇವರೂ ಕೂಡ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಚಂದ್ರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಲ್ ಆಡಳಿತ ಮಂಡಳಿಯನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸುರಕ್ಷತಾ ಕ್ರಮ ಅನುಸರಿಸದೆ ಕೆಲಸ ನಿರ್ವಹಿಸಿದ್ದೆ ಅವಘಡಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

