ನಂಜನಗೂಡು: ರೈತನ ಕಣ್ಣ ಮುಂದೆಯೇ ಮರಿ ಜೊತೆ ತಾಯಿ ಹುಲಿ ಹಾದು ಹೋದ ಘಟನೆ ಗ್ರಾಮಸ್ಥರನ್ನ ಬೆಚ್ಚಿಬೀಳಿಸಿದೆ.ನಂಜನಗೂಡು ತಾಲೂಕಿನ ಅಂಜನಾಪುರ ಮತ್ತು ಈರೇಗೌಡನ ಹುಂಡಿ ಗ್ರಾಮದ ಜಮೀನಿನಲ್ಲಿ ತಾಯಿ ಹಾಗೂ ಮರಿ ಹುಲಿಗಳು ಕಾಣಿಸಿಕೊಂಡಿವೆ.
ಈರೇಗೌಡನ ಹುಂಡಿಯ ದೊರೆಸ್ವಾಮಿ ಎಂಬುವರ ಜಮೀನಿನಲ್ಲಿರುವ ತಂಬಾಕು ಬ್ಯಾರಲ್ ಸಮೀಪ ಮರಿ ಜೊತೆ ತಾಯಿ ಹುಲಿ ಹಾದುಹೋಗಿದೆ.ಕೂಗಳತೆ ದೂರದಲ್ಲೇ ಹಾದುಹೋದ ದೃಶ್ಯಕಂಡು ದೊರೆಸ್ವಾಮಿ ಬೆಚ್ಚಿಬಿದ್ದಿದ್ದಾರೆ.

ಹೆಡಿಯಾಲ ವಿಭಾಗದ ಅರಣ್ಯ ಇಲಾಖೆಗೆ ಸುದ್ದಿ ರವಾನಿಸುತ್ತಿದ್ದಂತೆಯೇ ಸಿಬ್ಬಂದಿಗಳು ಧಾವಿಸಿದ್ದಾರೆ.ಭಾರಿ ಗಾತ್ರದ ಹುಲಿ ಹೆಜ್ಜೆ ಗುರುತು ಸಹ ಪತ್ತೆಯಾಗಿದೆ.ಕಾಡಿನತ್ತ ತೆರಳದೆ ಜಮೀನುಗಳಲ್ಲೇ ಹುಲಿ ತನ್ನ ಮರಿ ಜೊತೆ ಸೇರಿಕೊಂಡಿದೆ. ವ್ಯವಸಾಯಕ್ಕೆ ತೆರಳಲು ರೈತರು ಆತಂಕಕ್ಕೆ ಸಿಲುಕಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಹಾಗೂ ಮರಿಯ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.

