ನಂಜನಗೂಡು: ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ ದಾಸ್ ಆಯೋಗದ ಶಿಫಾರಸಿನ ಮೇರೆಗೆ ಪರಿಶಿಷ್ಟ ಜಾತಿ ಮತ್ತು ಉಪಜಾತಿಗಳ ಸಮಿತಿ 2025 ಸಮೀಕ್ಷೆಯನ್ನು ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ನಿಮಗೆ ಕೊಟ್ಟಿರುವ ಕಾಲಮಿತಿಯೊಳಗೆ ಜಾತಿ ಸಮೀಕ್ಷೆಯನ್ನು ಮಾಡಬೇಕು ಎಂದು ತಾಲ್ಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರು ತಿಳಿಸಿದರು.
ನಂಜನಗೂಡು ಪಟ್ಟಣದ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಂಜನಗೂಡು ತಾಲ್ಲೂಕಿನ 375 ಕ್ಕೂ ಹೆಚ್ಚು ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈಗಾಗಲೇ ಮೈಸೂರಿನಲ್ಲಿ ಸಮೀಕ್ಷೆ ಬಗ್ಗೆ ಆರು ಅಧಿಕಾರಿಗಳು ತರಬೇತಿ ಪಡೆದು ಇಂದು ಮಾಹಿತಿ ನೀಡಲು ಬಂದಿದ್ದಾರೆ. ಮೇ 5 ರಿಂದ 17ರವರೆಗೆ ಪರಿಶಿಷ್ಟ ಜಾತಿ ಮತ್ತು ಉಪಜಾತಿಯ ಕುಟುಂಬಗಳ ಸಮೀಕ್ಷೆಯನ್ನು 3 ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಗಣತಿ ನಡೆಯಲಿದೆ. ಗಣತಿಯ ಮೂಲಕ ಉಪಜಾತಿ, ಜನಸಂಖ್ಯೆ, ಆರ್ಥಿಕ ಸ್ಥಿತಿಗತಿ, ಉದ್ಯೋಗ, ಭೂ ಮಾಲೀಕತ್ವ ಮಾಹಿತಿಗಳನ್ನು ಕಲೆ ಹಾಕಬೇಕು.
ಎರಡನೇಯ ಸಮೀಕ್ಷೆಯು 19 ರಿಂದ 21 ರವರೆಗೆ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಆನ್ಲೈನ್ ಮೂಲಕ ಮೂರನೇ ಹಂತದಲ್ಲಿ ಸ್ವಯಂ ಘೋಷಣೆ ಮಾಡಿಕೊಂಡು ಸಮೀಕ್ಷೆ ನಡೆಸಬಹುದಾಗಿದೆ ಎಂದರು. ಅಧಿಕಾರಿಗಳು ಕಡ್ಡಾಯವಾಗಿ ಆಯಾ ಗ್ರಾಮಗಳ ಪರಿಶಿಷ್ಟ ಜನಾಂಗಗಳ ಮನೆ ಮನೆಗೆ ತೆರಳಿ ಕ್ರಮಬದ್ಧವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲ ಹರಣ ಮಾಡದೆ ಯಶಸ್ವಿಯಾಗಿ ಕಾಲಮಿತಿ ಒಳಗೆ ಸಮೀಕ್ಷೆಯನ್ನು ಮುಗಿಸುವಂತೆ ಸೂಚಿಸಿದರು.
ತರಬೇತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು, ತರಬೇತಿ ಅಧಿಕಾರಿಗಳಾದ ವಿಶ್ವನಾಥ್, ಭಾಸ್ಕರ್, ಚೆಲುವರಾಜು, ಮಹೇಶ್, ವಸಂತ ಕುಮಾರಿ, ಮಹದೇವಪ್ರಸಾದ್, ಕಿರಣ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

