ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ವತಿಯಿಂದ ಆಯೋಜಿಸಲಾದ ದಸರಾ ವಸ್ತು ಪ್ರದರ್ಶನ–2025ರ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿ–2025 ವತಿಯಿಂದ ವಿಶೇಷ ಕಲಾ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ರಾಜ್ಯದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಅರಿವು ಮೂಡಿಸುವುದು ಹಾಗೂ ಜಿಲ್ಲೆಯ ವಿವಿಧ ಕಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಪ ಸಮಿತಿ ವತಿಯಿಂದ ಚಿತ್ರಕಲೆ ಹಾಗೂ ಜೇಡಿ ಮಣ್ಣಿನ ಕಲಾಕೃತಿ ನಿರ್ಮಾಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ 50ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಮಕ್ಕಳು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿ, ಮೈಸೂರು ದಸರಾ ಜಂಬೂ ಸವಾರಿಯ ವೈಭವವನ್ನು ಚಿತ್ರಕಲೆಯ ಮೂಲಕ ಹಾಗೂ ಜೇಡಿ ಮಣ್ಣಿನ ಶಿಲ್ಪಗಳ ಮೂಲಕ ಮನಮೋಹಕವಾಗಿ ಮೂಡಿಸಿದರು. ಜಂಬೂ ಸವಾರಿಯ ಆನೆಯರ ಮೆರವಣಿಗೆ, ಅರಮನೆಯ ವೈಭವ, ದೀಪಾಲಂಕಾರ ಹಾಗೂ ಸಾಂಪ್ರದಾಯಿಕ ಸಂಸ್ಕೃತಿಯ ಅಂಶಗಳನ್ನು ಮಕ್ಕಳ ಕಲಾಕೃತಿಗಳು ಜೀವಂತವಾಗಿ ಪ್ರತಿಬಿಂಬಿಸಿವೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ಕಲ್ಪನೆ, ಬಣ್ಣಗಳ ಬಳಕೆ, ರೂಪಕ ಮತ್ತು ನಿಖರತೆಯಿಂದ ಪ್ರೇಕ್ಷಕರ ಗಮನ ಸೆಳೆದರು. ಜೇಡಿ ಮಣ್ಣಿನ ಕಲಾಕೃತಿಗಳಲ್ಲಿ ಜಂಬೂ ಸವಾರಿಯ ಆನೆಗಳು, ಮೆರವಣಿಗೆಯ ದೃಶ್ಯಗಳು ಹಾಗೂ ದಸರಾ ಉತ್ಸವದ ಸಾಂಪ್ರದಾಯಿಕತೆ ವಿಶಿಷ್ಟವಾಗಿ ಮೂಡಿ ಬಂದಿತು.
ಇದರಿಂದ ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆ ಹಾಗೂ ಸಾಂಸ್ಕೃತಿಕ ಅರಿವು ಸ್ಪಷ್ಟವಾಗಿ ಕಾಣಿಸಿಕೊಂಡಿತು. ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಾಧಿಕಾರದ ವತಿಯಿಂದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮಕ್ಕಳ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಯಲ್ಲಿ ಕಲೆ ಮತ್ತು ಸಂಸ್ಕೃತಿಯ ಮೇಲಿನ ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಆಯೋಜಕರು ಅಭಿಪ್ರಾಯಪಟ್ಟರು.
ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿ–2025ರ ಈ ಪ್ರಯತ್ನಕ್ಕೆ ಪಾಲಕರು ಹಾಗೂ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೃಜನಾತ್ಮಕ ಹಾಗೂ ತರಬೇತಿ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ದಸರಾ ವಸ್ತು ಪ್ರದರ್ಶನದ ಅಂಗವಾಗಿ ನಡೆದ ಈ ಕಲಾ ಸ್ಪರ್ಧೆಗಳು ಮಕ್ಕಳ ಪ್ರತಿಭೆಗೆ ವೇದಿಕೆಯಾಗಿ, ಮೈಸೂರು ದಸರಾ ಸಂಸ್ಕೃತಿಯ ವೈಭವವನ್ನು ಹೊಸ ತಲೆಮಾರಿಗೆ ಪರಿಚಯಿಸಿದಂತಾಯಿತು.

