ನಂಜನಗೂಡು: ಕೆಟ್ಟು ನಿಂತಿರುವ ಬೀದಿ ದೀಪಗಳು, ರಸ್ತೆ ಚರಂಡಿಯಂತೂ ಮೊದಲೇ ಇಲ್ಲ. ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನಗರ ಸಭೆ ಕಲ್ಪಿಸಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂಜನಗೂಡು ನಗರದ ದೇವಿರಮ್ಮಹಳ್ಳಿಯ ವಾಟರ್ ಟ್ಯಾಂಕ್ ಬಳಿ ಇರುವ ಪ್ರಭಾಕರ್ ಮತ್ತು ರಾಮನಾಥ್ ಲೇಔಟ್ ನಲ್ಲಿ ಸುಮಾರು ತಿಂಗಳುಗಳಿಂದ ಬೀದಿ ದೀಪಗಳು ಕೆಟ್ಟು ನಿಂತಿವೆ. ವಿದ್ಯುತ್ ದೀಪ ಇಲ್ಲದೆ ರಾತ್ರಿಯ ಸಮಯದಲ್ಲಿ ನಿವಾಸಿಗಳು ಓಡಾಡಲು ತುಂಬಾ ತೊಂದರೆಯಾಗಿದೆ. ಅಲ್ಲದೆ ಬಡಾವಣೆಗಳಲ್ಲಿ ಚರಂಡಿ ಮತ್ತು ರಸ್ತೆ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.

ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸಂಚರಿಸಲು ರಸ್ತೆ ಇಲ್ಲದೆ ನಿವಾಸಿಗಳು ಹರಸಹಾಸ ಪಡಬೇಕಾಗಿದೆ. ರಸ್ತೆಯಲ್ಲಿ ಶಾಲಾ ಮಕ್ಕಳು ಮತ್ತು ವಯೋವೃದ್ಧರು ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಗಿಡಗಂಟಿಗಳು ಬೆಳೆದುಕೊಂಡು ಹಾವು ಚೇಳುಗಳ ವಾಸಸ್ಥಾನವಾಗಿದೆ. ಬೀದಿದೀಪಗಳನ್ನು ಅಳವಡಿಸುವಂತೆ ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಿಕೊಡುವಂತೆ ಹಲವು ಬಾರಿ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಶಾಸಕರಿಗೆ ತಿಳಿಸಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಕೂಡಲೇ ನಮಗೆ ಬೀದಿ ದೀಪಗಳನ್ನು ಅಳವಡಿಸಿ ಕೊಡಬೇಕು. ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಇಲ್ಲವಾದಲ್ಲಿ ನಗರಸಭೆಗೆ ನಿವಾಸಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.