ನಂಜನಗೂಡು: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಮಗುವಿನ ಶವ ತರಲು ಹಣವಿಲ್ಲದೆ ಕುಟುಂಬಸ್ಥರು ಪರದಾಡಿದ್ದಾರೆ. ಸತ್ತ ಮಗುವಿನ ಶವವನ್ನು ಖಾಸಗಿ ಆಸ್ಪತ್ರೆಯಿಂದ ತರಲು ಮಗುವಿನ ದೊಡ್ಡಮ್ಮ ಸೆರಗೊಡ್ಡಿ ಭಿಕ್ಷೆ ಬೇಡಿರುವ ಮನಕಲಕುವ ವಿದ್ರಾವಕ ಘಟನೆ ನಂಜನಗೂಡು ತಾಲ್ಲೂಕಿನ ಹೆಡೆತಲೆ ಗ್ರಾಮದಲ್ಲಿ ನಡೆದಿದೆ. ‌

ಹೆಡತಲೆ ಗ್ರಾಮದ ಮಹೇಶ್ ಮತ್ತು ರಾಣಿ ಎಂಬ ದಂಪತಿಗಳ ಐದು ವರ್ಷದ ಮಗು ಆದ್ಯ ಮೃತ ದುರ್ದೈವಿ. ಮಂಗಳವಾರ ಸಂಜೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಚಾಮರಾಜನಗರ ಮತ್ತು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು.

ಅಪಘಾತದಲ್ಲಿ ಹೆಮ್ಮರಗಾಲ ಗ್ರಾಮದ ಮೂವರಿಗೆ ಮತ್ತು ಹೆಡತಲೆ ಗ್ರಾಮದ ಮಹೇಶ್, ರಾಣಿ ಎಂಬ ದಂಪತಿಗಳು ಸೇರಿ ಮಗುವಿಗೂ ಗಂಭೀರ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಐದು ವರ್ಷದ ಆದ್ಯ ಎಂಬ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಮಗುವಿನ ತಂದೆ ತಾಯಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ನಡುವೆ ಮೃತಪಟ್ಟಿರುವ ಮಗುವಿನ ಶವವನ್ನು ತರಲು ಮೈಸೂರಿನ ಖಾಸಗಿ ಆಸ್ಪತ್ರೆ ಚಿಕಿತ್ಸೆ ವೆಚ್ಚ ಸರಿಸುಮಾರು ಒಂದುವರೆ ಲಕ್ಷ ಹಣವನ್ನು ಕಟ್ಟಿ ನಂತರ ಶವವನ್ನು ತೆಗೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ತಾಕೀತು ಮಾಡಿದ್ದಾರೆ.

ಅಷ್ಟೊಂದು ಹಣವನ್ನು ಬಡ ಕುಟುಂಬ ಕಟ್ಟಲಾಗದೆ ತಮ್ಮ ಗ್ರಾಮಕ್ಕೆ ಬಂದು ಗ್ರಾಮದ ಪ್ರತಿಯೊಂದು ಮನೆಗೆ ಮಗುವಿನ ದೊಡ್ಡಮ್ಮ ಮಂಗಳಮ್ಮ ಮನೆ ಮುಂದೆ ಹೋಗಿ ಸೆರಗೊಡ್ಡಿ ಭಿಕ್ಷೆ ಬೇಡಿಕೊಂಡು ಸುಮಾರು 80 ಸಾವಿರ ಹಣವನ್ನು ಸಂಗ್ರಹಿಸಿದ್ದಾಳೆ. ಭಿಕ್ಷೆ ಬೇಡುತ್ತಿರುವ ದೃಶ್ಯಕಂಡು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ. ನೊಂದ ಕುಟುಂಬಕ್ಕೆ ಪ್ರತಿ ಮನೆಯ ಕುಟುಂಬಸ್ಥರು ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಮಾನವೀಯತೆ ಇಲ್ಲದ ಖಾಸಗಿ ಆಸ್ಪತ್ರೆ ಸಾವಿನಲ್ಲೂ ಸುಲಿಗೆ ಮಾಡುತ್ತಿರುವ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.