ನಂಜನಗೂಡು: ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪೋಷಕರು ತಮ್ಮ ನಡೆ-ನುಡಿಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಜೆಎಸ್‌ಎಸ್ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಹಾಗೂ ಸಂಪನ್ಮೂಲ ವ್ಯಕ್ತಿ ಜಿ.ಎಲ್. ತ್ರಿಪುರಾಂತಕ ಹೇಳಿದರು.

ನಗರದ ಶ್ರವಣ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯನ್ನು ಜಗತ್ತಿನ ಯಾವುದೇ ದೇಶವೂ ಮೀರಿಸಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯನ್ನು ಗೌರವಿಸಿ, ಅದರ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ದೀಪ ಬೆಳಗಿಸುವುದು ನಮ್ಮ ಸಂಸ್ಕೃತಿ, ದೀಪ ಆರಿಸುವುದಲ್ಲ. ಮಕ್ಕಳಿಗೆ ಉತ್ತಮ ಉಡುಪು, ನಡವಳಿಕೆ ಹಾಗೂ ಜೀವನ ಮೌಲ್ಯಗಳ ಬಗ್ಗೆ ಪೋಷಕರು ಅರಿವು ಮೂಡಿಸಬೇಕು ಎಂದರು.

ಮಹಿಳೆಯರು ಧಾರಾವಾಹಿಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಕುಟುಂಬ ಮತ್ತು ಮಕ್ಕಳ ಮೇಲೆ ಗಮನ ಕಡಿಮೆಯಾಗುತ್ತಿದೆ. ಮಕ್ಕಳು ಮನೆಯಲ್ಲಿರುವಾಗ ಪೋಷಕರು ಟಿವಿ ಹಾಗೂ ಮೊಬೈಲ್ ಬಳಕೆಗೆ ಮಿತಿ ಹಾಕಬೇಕು. ಪೋಷಕರು ಮಾಡುವ ಕೆಲಸಗಳನ್ನೇ ಮಕ್ಕಳು ಅನುಸರಿಸುವುದರಿಂದ, ಹಿರಿಯರು ಮೊದಲು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು. ಮೊಬೈಲ್ ಬಳಕೆಯ ದುರುಪಯೋಗದಿಂದ ಅನೈತಿಕ ಸಂಬಂಧಗಳು ಬೆಳೆದು ಕುಟುಂಬದ ನೆಮ್ಮದಿ ಹಾಳಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಹಿಂದೆ ಸಾವಿರ ಸುಳ್ಳು ಹೇಳಿಯಾದರೂ ಮದುವೆ ಮಾಡುತ್ತಿದ್ದರು ಎಂಬ ಮಾತಿತ್ತು. ಆದರೆ ಇಂದು ಸಾವಿರ ಸತ್ಯ ಹೇಳಿದರೂ ಮದುವೆಗಳು ನಡೆಯದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮದುವೆಗಿಂತ ವಿಚ್ಛೇದನಗಳೇ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವ, ಸಹನೆ ಮತ್ತು ಹೊಂದಾಣಿಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಇಂದು ಆಡಂಬರದ ಜೀವನ ಹೆಚ್ಚಾಗುತ್ತಿದ್ದು, ಅಕ್ಕಪಕ್ಕದವರ ಜೀವನಶೈಲಿಯನ್ನು ಕಂಡು ಅಸೂಯೆಪಡುವ ಪ್ರವೃತ್ತಿ ಬಿಡಬೇಕು. ಹಿಂದೆ ಆಸ್ಪತ್ರೆಗಳು ಕಡಿಮೆ ಇದ್ದರೂ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಇಂದು ಆಸ್ಪತ್ರೆಗಳು ಹತ್ತಿರವಾಗಿದ್ದರೂ ಆರೋಗ್ಯ ದೂರವಾಗುತ್ತಿದೆ. ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಹೊರಗಿನ ಆಹಾರ ಸೇವನೆಯನ್ನು ಕಡಿಮೆ ಮಾಡಿ, ಮನೆಯಲ್ಲಿಯೇ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು ಎಂದರು.

ಮಕ್ಕಳಿಗೆ ಅಡುಗೆ ಸೇರಿದಂತೆ ಜೀವನಕ್ಕೆ ಅಗತ್ಯವಾದ ಕೌಶಲಗಳನ್ನು ಕಲಿಸಬೇಕು. ಇತರರನ್ನು ಗೌರವಿಸುವ ಗುಣ, ಉತ್ತಮ ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಮೈಸೂರು ಹಾಲು ಒಕ್ಕೂಟದ ಮಾಜಿ ನಿರ್ದೇಶಕಿ ಬಿ. ನೀಲಾಂಬಿಕೆ ಮಹೇಶ್ ಉದ್ಘಾಟಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಭಾಗ್ಯಮಣಿ ಅಧ್ಯಕ್ಷತೆ ವಹಿಸಿದ್ದರು. ಪ್ರೇರಣ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಎಸ್. ಚಂದ್ರಶೇಖರ್ ಅವರು ಹದಿಹರೆಯದ ಮಕ್ಕಳ ಮನಸ್ಥಿತಿ, ಅವರೊಂದಿಗೆ ಪೋಷಕರು ಬೆಳೆಸಿಕೊಳ್ಳಬೇಕಾದ ಉತ್ತಮ ಸಂಬಂಧ, ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯ ಹಾಗೂ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ನಂಜನಗೂಡು ಯೋಜನಾಧಿಕಾರಿ ಕೆ. ಧರ್ಮರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಶಶಿಕಲಾ, ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳಾದ ಶಮಾ, ಸಂಪತ್, ಚಂದನ್, ಸಿಂಚನ, ಬೆಟ್ಟೇಗೌಡ, ಸುಮತಿ ಸೇರಿದಂತೆ ಸೇವಾ ಪ್ರತಿನಿಧಿಗಳು ಹಾಗೂ ಮಹಿಳೆಯರು ಹಾಜರಿದ್ದರು.