ಮೈಸೂರು: ಮತದಾನ ಕೇವಲ 18 ವರ್ಷ ತುಂಬಿದ ಮೇಲೆ ಅಲ್ಲ, ಶಾಲೆಯಿಂದಲೇ ಶುರು ಮಾಡಬೇಕು ಎಂಬ ಸಂದೇಶವನ್ನು ತಿ.ನರಸೀಪುರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೀಡಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ಪ್ರಾಯೋಗಿಕವಾಗಿ ಕಲಿಸಲು ‘ಶಾಲಾ ಸಂಸತ್ತು’ ಎಂಬ ವಿನೂತನ ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು.
ತಿ.ನರಸೀಪುರ ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ತಿಗೆ 2026-27ನೇ ಸಾಲಿನ ಚುನಾವಣೆಯನ್ನು ನಿಜವಾದ ಲೋಕಸಭಾ-ವಿಧಾನಸಭಾ ಮಾದರಿಯಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಶಾಲೆಯ ಗುರುತಿನ ಚೀಟಿ ನೀಡಲಾಗಿತ್ತು. ಚುನಾವಣಾ ನಿಯಮದಂತೆ 40 ವಿದ್ಯಾರ್ಥಿಗಳು ನಾಮಪತ್ರಗಳನ್ನು ಚುನಾವಣಾಧಿಕಾರಿಯಾಗಿದ್ದ ಪ್ರಾಂಶುಪಾಲರಾದ ಮಮತ ರವರಿಗೆ ಎರಡು ದಿನಗಳ ಮುಂಚೆಯೇ ಸಲ್ಲಿಸಿದ್ದರು. ಚುನಾವಣೆ ದಿನದಂದು ಮತಗಟ್ಟೆಯಿಂದ ನೂರು ಮೀಟರ್ ದೂರವಿರಬೇಕು. ಹಾಗೇ ಅರಿವು ಮೂಡಿಸುವ ನಾಮಫಲಕಗಳನ್ನು ಅಳವಡಿಸಿದ್ದು, ವಿಶೇಷವಾಗಿತ್ತು.
ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಮತ ಚಲಾಯಿಸಲು ಪ್ರತ್ಯೇಕವಾಗಿ ಎರಡು ಸಾಲುಗಳನ್ನು ಮಾಡಲಾಗಿತ್ತು. ವಿದ್ಯಾರ್ಥಿಗಳು ಶಿಸ್ತಿನಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಮೊಬೈಲ್ ಇವಿಎಂ ಮೂಲಕವೇ ಮತದಾನ ನಡೆಯಿತು. ಮಕ್ಕಳ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಯಿತು.
ಚುನಾವಣೆಯಲ್ಲಿ ಸ್ಪರ್ಧಿಸಲು 40 ಮಂದಿ ನಾಮಪತ್ರ ಸಲ್ಲಿಸಿದ್ದು, 1 ನಾಮಪತ್ರ ತಿರಸ್ಕೃತವಾಯಿತು. 39 ಅಭ್ಯರ್ಥಿಗಳು ಕಣದಲ್ಲಿ ಉಳಿದರು. ಶಾಲೆಯ 85 ವಿದ್ಯಾರ್ಥಿಗಳಲ್ಲಿ 82 ಮಂದಿ ಮತ ಚಲಾಯಿಸುವ ಮೂಲಕ ಶೇ.97 ರಷ್ಟು ದಾಖಲೆ ಮತದಾನವಾಯಿತು. ಮತದಾನ ಮಾಡಿ ಹೊರ ಬಂದ ಮಕ್ಕಳು ಎಡಗೈ ತೋರು ಬೆರಳನ್ನು ಪ್ರದರ್ಶನ ಮಾಡಿ ಸಂತಸ ವ್ಯಕ್ತಪಡಿಸಿದರು.
ಮಧ್ಯಾಹ್ನ ಮತ ಎಣಿಕೆ ನಡೆದು 18 ಮಂದಿ ಬಹುಮತದಿಂದ ಶಾಲಾ ಸಂಸತ್ತಿಗೆ ಆಯ್ಕೆಯಾದರು. ನಂತರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಕ್ಕೆ ಪ್ರತ್ಯೇಕ ಚುನಾವಣೆ ನಡೆಯಿತು. ಬಳಿಕ ಸಂಪುಟ ರಚಿಸಿ ವಿದ್ಯಾರ್ಥಿಗಳಿಗೆ ಖಾತೆ ಹಂಚಿಕೆ ಮಾಡಿ ಪ್ರಮಾಣವಚನ ಸ್ವೀಕಾರವೂ ನಡೆಯಿತು.
ಎಸ್ಐಆರ್ ಜಾಗೃತಿ:
ಕಾರ್ಯಕ್ರಮದಲ್ಲಿ ಭಾರತ ಚುನಾವಣಾ ಆಯೋಗದ ಎಸ್ಐಆರ್ – Special Intensive Revision ಬಗ್ಗೆಯೂ ಜಾಗೃತಿ ಮೂಡಿಸಲಾಯಿತು. ಮತದಾನ ನಮ್ಮ ಮನೆಯ ಹೆಣ್ಣು ಮಕ್ಕಳಷ್ಟೇ ಶ್ರೇಷ್ಠ, ಯಾರು ಮಾರಿಕೊಳ್ಳಬಾರದು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತಿನ ಪೋಸ್ಟರ್ ಎಲ್ಲರ ಗಮನ ಸೆಳೆಯಿತು. “ಮತವನ್ನು ಹಣಕ್ಕೆ, ಹೆಂಡಕ್ಕೆ ಮಾರಿಕೊಳ್ಳಬೇಡಿ. ತಪ್ಪದೇ ನಿಮ್ಮ ಹಕ್ಕು ಚಲಾಯಿಸಿ” ಎಂಬ ನಾಮಫಲಕಗಳನ್ನು ಪ್ರದರ್ಶಿಸಲಾಯಿತು.
ಶಾಲಾ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಸಲು ಪ್ರಾಯೋಗಿಕವಾಗಿ ತಿಳಿಸಲು ಮತ್ತು ಮಕ್ಕಳಲ್ಲಿ ನಾಯಕತ್ವ, ಜವಾಬ್ದಾರಿ, ಮತದಾನದ ಮಹತ್ವದ ಅರಿವು ಮೂಡಿದೆ. ಮುಖ್ಯ ಚುನಾವಣಾಧಿಕಾರಿಯಾಗಿ ಶಾಲೆಯ ಪ್ರಾಂಶುಪಾಲರಾದ ಮಮತಾ, ಪಿಆರ್ ಒ ಆಗಿ ಪ್ರಭಾರ ನಿಲಯಪಾಲಕ ವಿ.ವಿ ಶಿವಪ್ರಕಾಶ್, ಎಪಿಆರ್ ಒ ಶಶಿಕಲಾ, ಗುರುಪ್ರಸಾದ್, ಪಿಒ1 ಸಿ.ಶಿವಪ್ರಸಾದ್, ಪಿಒ 2 ಕಾವ್ಯ, ನಿಂಗರಾಜಮ್ಮ , ಭರತ್ ರಾಜ್ ಗೌತಮ್, ಸಹಾಯಕ ಸಿಬ್ಬಂದಿ ಕೀರ್ತಿ.ಕೆ, ಕಾರ್ಯನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳು ಭಾಗವಹಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

