ನಂಜನಗೂಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಮೈಸೂರು ಜಿಲ್ಲೆ, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಜೆಎಸ್ಎಸ್ ಮಹಾವಿದ್ಯಾಪೀಠ ಇವರ ಸಹಯೋಗದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ನವ ಜೀವನ  ಸಮಿತಿ ಸದಸ್ಯರ  ಸಮಾವೇಶವನ್ನು ನಂಜನಗೂಡು ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಆಯೋಜಿಸಲಾಗಿತ್ತು.

ಇದಕ್ಕೂ ಮುನ್ನ ನಂಜನಗೂಡಿನ ಹುಲ್ಲಹಳ್ಳಿ ವೃತದಲ್ಲಿ ಮದ್ಯೆಪಾನ ಮುಕ್ತ ಜಾಗೃತಿ ಜಾಥಕ್ಕೆ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಚಾಲನೆ ನೀಡಿದರು. ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ವಿವಿಧ ಘೋಷಣೆಗಳನ್ನು ಕೂಗುತ್ತಾ ರಾಜ್ಯದಲ್ಲಿ ಮದ್ಯಪಾನವನ್ನು ನಿಷೇಧ ಮಾಡುವಂತೆ ನಾಮಫಲಕಗಳನ್ನು ಹಿಡಿದು ಕಾಲ್ನಡಿಗೆ ಮೂಲಕ ಜೆಎಸ್ಎಸ್ ಮಂಗಳ ಮಂಟಪದವರೆಗೆ ಜಾಥಾ ನಡೆಸಲಾಯಿತು.

ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಿ.!

ಗುಜರಾತ್ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಪಾನಮುಕ್ತ ರಾಜ್ಯವನ್ನಾಗಿ ಮಾಡಿದೆ ಅದರ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಮದ್ಯಪಾನವನ್ನು ನಿಷೇಧ ಮಾಡಿದರೆ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತವೆ ಎಂದು ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯರು ಅಳಲು ತೋಡಿಕೊಂಡರು. ಅಲ್ಲದೆ ಕಾಲ್ನಡಿಗೆ ಜಾಥದಲ್ಲೂ ರಾಜ್ಯದಲ್ಲಿ ಮದ್ಯಪಾನವನ್ನು ನಿಷೇಧ ಮಾಡುವಂತೆ ಮಹಿಳೆಯರು ದಿಕ್ಕಾರದ ಘೋಷಣೆಗಳನ್ನು ಕೂಗಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಜನ ಜಾಗೃತಿ ಅಧ್ಯಕ್ಷ ಕೆ.ಎನ್ ಪ್ರಭುಸ್ವಾಮಿ, ಪ್ರತಿ ವರ್ಷವೂ ನಾವು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೆ ಕರ್ನಾಟಕ ರಾಜ್ಯದಲ್ಲಿ ಮದ್ಯಪಾನವನ್ನು ನಿಷೇಧ ಮಾಡಿ, ಪಾನಮುಕ್ತ ರಾಜ್ಯವನ್ನಾಗಿ ಮಾಡುವುದರ ಮೂಲಕ ಕೋಟ್ಯಾಂತರ ಕುಟುಂಬಗಳ ನೆಮ್ಮದಿಯನ್ನು ಕಟ್ಟಿಕೊಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತಿದ್ದೇವೆ. ಆದರೆ, ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ , ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ, ಜೆಎಸ್ಎಸ್ ಕಾಲೇಜಿನ ಮುಖ್ಯಸ್ಥ ಡಾ.ಎಂ. ಪಿ ಸೋಮಶೇಖರ್, ಅನುರಾಗ ಮಕ್ಕಳ ಮನೆಯ ಸಂಸ್ಥಾಪಕ ಸೋಮಶೇಖರ ಮೂರ್ತಿ, ಜನಜಾಗೃತಿ ಸಮಿತಿಯ ಉಪಾಧ್ಯಕ್ಷೆ ಕಮಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿಜಯಕುಮಾರ್ ನಾಗನಾಳ, ತಾಲ್ಲೂಕು ಯೋಜನಾಧಿಕಾರಿ ಧರ್ಮರಾಜ್,

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಲತಾ ಮುದ್ದು ಮೋಹನ್, ಜನಜಾಗೃತಿ ಸಮಿತಿಯ ಸದಸ್ಯರಾದ ಶಿವಯ್ಯ, ವರದರಾಜು, ನಾರಾಯಣ್, ಮೂರ್ತಿ, ಶಶಿಕಲಾ ಗಿರೀಶ್, ಹೊನ್ನ ನಾಯಕ, ಜಗದೀಶ್ ಕಣೇನೂರು ಸೇರಿದಂತೆ ನಮ್ಮ ಜೀವನ ಸಮಿತಿಯ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.