ಮೈಸೂರು: ಸಂಗೀತವೇ ಉಸಿರಾಗಿದ್ದ ಗಾನಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರಿಗೆ ಮೈಸೂರಿನ ಕಲಾಭಿಮಾನಿಗಳು ಕಣ್ಣೀರಿನ ನುಡಿನಮನ ಸಲ್ಲಿಸಿದರು. ಮೈಸೂರಿನ ರಾಮಕೃಷ್ಣ ನಗರದ ಗಂಧರ್ವ ಸಂಗೀತ ಅಕಾಡೆಮಿಯಲ್ಲಿ “ಶ್ರದ್ಧಾಂಜಲಿ ಮತ್ತು ಗೀತಾ ಗಾಯನ” ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ಸಭಿಕರೆಲ್ಲರೂ ಕೆಲ ಕ್ಷಣ ಮೌನಾಚರಣೆ ಮಾಡಿ ತಮ್ಮ ಪ್ರೀತಿಯ ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು.
ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಆರ್.ಮಹೇಂದ್ರ ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ ಜಾತಿ ಬೇಕಾಗಿಲ್ಲ. ಜಾನಕಿ ಅಮ್ಮನವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ, ಮಾನಸಿಕವಾಗಿ ಅವರು ಇಂದಿಗೂ ನಮ್ಮೊಟ್ಟಿಗೆ ಇದ್ದಾರೆ. ಸಂಗೀತಗಾರರಿಗೆ ಸರಸ್ವತಿಯೇ ಆದ ಅವರು, ಕೊನೆಯ ಕ್ಷಣಗಳಲ್ಲಿ ಮೈಸೂರನ್ನೇ ಆಯ್ಕೆ ಮಾಡಿಕೊಂಡು ಇಲ್ಲೇ ನೆಲೆಸಿದ್ದರು. ಇದು ನಮ್ಮ ಪುಣ್ಯ ಎಂದು ಹೇಳಿದರು.
ಜಾನಕಿ ಅಮ್ಮನವರ ವ್ಯಕ್ತಿತ್ವವನ್ನು ನೆನೆದ ಆರ್.ಮಹೇಂದ್ರ ಅವರು, ಅವರು ಹಾಡುವ ಶೈಲಿ, ವಾಯ್ಸ್ ಮಾಡ್ಯುಲೇಷನ್ ಇಂದಿಗೂ ಗಾಯಕರಿಗೆ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಅವರು ತಮ್ಮ ಕಂಠ ನೀಡಿದ್ದಾರೆ. 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರದ್ದು ಎಂದು ಸ್ಮರಿಸಿದರು.
ನಾನು ಕೂಡ ಅವರೊಂದಿಗೆ ಎರಡು ವೇದಿಕೆಯಲ್ಲಿ ಹಾಡುವ ಅವಕಾಶ ಪಡೆದಿದ್ದೆ. ಅದು ಮರೆಯಲಾಗದ ಕ್ಷಣ. ಮೊದಲ ಬಾರಿ ಅವರನ್ನು ಭೇಟಿಯಾದಾಗ ತಮ್ಮ ಮಕ್ಕಳಂತೆ ನೋಡಿಕೊಂಡು, ಕೈ ತುತ್ತು ತಿನಿಸಿದರು. ಅಷ್ಟೊಂದು ಆತ್ಮೀಯತೆ. ನಾನು ಸಂಗೀತ ಕಲಿಯುತ್ತಿದ್ದಾಗ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಚಿನ್ನದ ಪದಕವನ್ನು ಅವರ ಕೈಯಿಂದಲೇ ಪಡೆದಿದ್ದೆ. ಅಂತಹ ಸರಳ, ಸಾರ್ಥಕ ಜೀವನ ನಡೆಸಿದ ಮಹಾನ್ ಕಲಾವಿದೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟರು.
ನುಡಿನಮನದ ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯ ಗಾಯಕರು ಜಾನಕಿ ಅಮ್ಮನವರು ಹಾಡಿರುವ ಸುಪ್ರಸಿದ್ಧ ಗೀತೆಗಳನ್ನು ಹಾಡಿ ಗೀತಾ ಗಾಯನದ ಮೂಲಕ ನಮನ ಸಲ್ಲಿಸಿದರು. ಅವರ ಕಂಠದ ಪ್ರತಿಧ್ವನಿ ಸಭಾಂಗಣದಲ್ಲಿ ಮೊಳಗಿದಾಗ ಹಲವರ ಕಣ್ಣುಗಳು ತೇವಗೊಂಡವು. ಸ್ವರ ಮೌನವಾದರೂ, ಆ ಸ್ವರದ ಶಕ್ತಿ ಇಂದಿಗೂ ಕೋಟಿ ಹೃದಯಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಶ್ರದ್ಧಾಂಜಲಿ ಮತ್ತೊಮ್ಮೆ ಸಾಬೀತುಪಡಿಸಿತು.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ನಿವೃತ್ತ ಎಇಇ ಸುರೇಶ್, ಗಾಯಕರಾದ ಲಕ್ಷ್ಮಣ್, ಮೀನಾಕುಮಾರಿ, ಬಸವರಾಜು, ಚೇತನ್, ಡಾ.ಜಗದೀಶ್, ಸಂಜಯ್, ದಿನೇಶ್, ಡಾ. ರತ್ನ ಹಾಲಪ್ಪಗೌಡ, ರಾಜೇಶ್ವರಿ, ಮಹೇಶ್, ಮಂಜುನಾಥ್ ಎಂ, ಪವಿತ್ರ, ಎಂ. ನಟರಾಜ್, ಸೇರಿದಂತೆ ಅನೇಕ ಸಂಗೀತ ಪ್ರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.

