ಮೈಸೂರು: ಗೂಡ್ಸ್ ವ್ಯಾನ್ ಹಾಗೂ ಮಿನಿಬಸ್ ನಡುವೆ ಸಂಭವಿಸಿದ ಅಪಘಾತ ಪರಿಣಾಮ 6 ಮಂದಿ ಗಾಯಗೊಂಡಿದ್ದಯ ಗೂಡ್ಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಶುಂಠಿ ಕೆಲಸ ಮುಗಿಸಿ ಕಾರ್ಮಿಕರು ಗೂಡ್ಸ್ ಆಪೆಯಲ್ಲಿ ವಾಪಸ್ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ. ಎಚ್.ಡಿ.ಕೋಟೆ ತಾಲೋಕಿನ ಮೇಟಿಕುಪ್ಪೆ ಗ್ರಾಮದ ಗೂಡ್ಸ್ ಚಾಲಕ ಗುರುಸ್ವಾಮಿ ಮೃತ ದುರ್ದೈವಿ. ಮಂಡ್ಯ ಜಿಲ್ಲೆಯ ಮದ್ದೂರು ತಾಲೋಕಿನ ನಾಗಮ್ಮ, ಕಿರಣ, ಶಿಲ್ವ ಮತ್ತು ಕೆ.ಆರ್.ಎಸ್ ಸಮೀಪದ ಬಸವನಪುರ ಗ್ರಾಮದ ಲಕ್ಷ್ಮಿ, ಅನು ಸೇರಿ 6ಮಂದಿ ಗಾಯಗೊಂಡಿದ್ದು ವಯೋವೃದ್ದ ನಾಗಮ್ಮ ಎಂಬುವರ ಸ್ಥಿತಿ ಗಂಭೀರವಾಗಿದೆ.
ಶಿಲ್ವ ಅವರ ಮಗು ಆಶ್ವರ್ಯಕರ ರೀತಿಯಲ್ಲಿ ಅನಾಹುತದಿಂದ ಪರಾಗಿದೆ. ಘಟನಾ ಸ್ಥಳದಿಂದ ಪುಟಾಣಿ ಮಗುವನ್ನು ರಕ್ಷಿಸಿದ ಇನ್ಸ್ ಪೆಕ್ಟರ್ ಗಂಗಾಧರ ಪೊಲೀಸ್ ವಾಹನದಲ್ಲಿ ಮಗುವನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಿ ಮಾನವೀಯತೆ ಮೆರೆದಿದ್ದಾರೆ.ಮಂಡ್ಯ ಜಿಲ್ಲೆಯ ಈ ಕೂಲಿ ಕಾರ್ಮಿಕರು ಇಂದು ಅಣ್ಣೂರ ಬಳಿ ಶುಂಠಿ ಬಿಡಿಸಿ ಸಂಜೆಯಾಗುತ್ತಿದ್ದಂತೆಯೇ ಮೇಸ್ತ್ರಿ ಆದೇಶದಂತೆ ತಾಲೋಕಿನ ಬೇರೆ ಗ್ರಾಮದ ಕಡೆ ತೆರಳುತ್ತಿದ್ದರು.
ಟೈಗರ್ ಬ್ಲಾಕ್ ಸಮೀಪದಲ್ಲಿ ವಿರುದ್ದ ದಿಕ್ಕಿನಿಂದ ಬಂದ ಮಿನಿ ಬಸ್ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗೂಡ್ಸ್ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದವರು ಚಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದಾರೆ. ಮಗು ಹೊರತು ಪಡಿಸಿ ಇನ್ನುಳಿದ ಆರು ಮಂದಿಗೂ ಗಾಯಗಳಾಗಿದೆ.
ಗಾಯಾಳುಗಳನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ನಾಗಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

