ನಂಜನಗೂಡು: ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಕೊಳಚೆ ನೀರು ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಹೊಸ ಬಡಾವಣೆ ಮತ್ತು ಹಳೆಯ ಬಡಾವಣೆಯ ನಡುವೆ ಹರಿಯುತ್ತಿರುವ ಕೊಳಚೆ ನೀರು ದಲಿತರ ಬೀದಿಗೆ ನುಗ್ಗುತ್ತಿದ್ದು, ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರುಗಾಲುವೆಯಾಗಿ ಇರಬೇಕಾದ ವ್ಯವಸ್ಥೆ ದೊಡ್ಡ ಚರಂಡಿಯಂತಾಗಿದ್ದು, ಕೊಳಚೆ ನೀರು ಸರಾಗವಾಗಿ ಹರಿಯದೆ ದುರ್ವಾಸನೆ ಬೀರುತ್ತಿದೆ. ಅಷ್ಟೇ ಅಲ್ಲದೆ, ಚರಂಡಿ ನೀರು ಕೆರೆಗೂ ಹರಿಯುತ್ತಿದ್ದು, ಪರಿಸರ ಮಾಲಿನ್ಯದ ಆತಂಕ ಎದುರಾಗಿದೆ. ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಹಾವು-ಚೇಳುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ರಾತ್ರಿ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.

ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕಾದ ವ್ಯವಸ್ಥೆಯೇ ಜನರಿಗೆ ಸಂಕಷ್ಟ ತಂದೊಡ್ಡಿದೆ. ಕೊಳಚೆ ನೀರಿನಿಂದ ಉಂಟಾಗುತ್ತಿರುವ ದುರ್ವಾಸನೆ, ಸೊಳ್ಳೆಗಳ ಕಾಟ ಹಾಗೂ ಗಿಡಗಂಟಿಗಳ ಸಮಸ್ಯೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಸರಿಪಡಿಸಬೇಕು. ಕೊಳಚೆ ನೀರು ಕೆರೆಗೆ ಹರಿಯದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಗ್ರಾಮಸ್ಥರ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.