ನಂಜನಗೂಡು: ಮೂರು ತಲೆಮಾರುಗಳಿಂದ ವಾಸವಿದ್ದ ನಾಲ್ಕು ಕುಟುಂಬಗಳು ರಾತ್ರೋ ರಾತ್ರಿ ವಸತಿಹೀನರಾಗಿ ಬೀದಿಗೆ ಬಿದ್ದ ಘಟನೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ವಾಸವಿದ್ದ ಮನೆಗಳನ್ನು ತೆರುವುಗೊಳಿಸಿದ ಪರಿಣಾಮ ದಾರಿ ಕಾಣದೆ ಬೀದಿಯನ್ನೇ ಆಶ್ರಯಿಸಿದ್ದಾರೆ. ತಮಗೆ ನ್ಯಾಯ ದೊರೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಂದಿ ಜೋಗಿ ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಹೊರಳವಾಡಿ ಹೊಸೂರು ಗ್ರಾಮದ ಸರ್ವೆ ನಂ 478/217 ರಲ್ಲಿ 6 ಗುಂಟೆ ಜಮೀನು ಕಳೆದ ನೂರಾರು ವರ್ಷಗಳ ಹಿಂದೆ ಹಂದಿ ಜೋಗಿ ಕುಟುಂಬದ ಹಿರಿಯರಾದ ವೆಂಕಟಯ್ಯ ಎಂಬುವರು ಖರೀದಿಸಿದ್ದರೆಂದು ಹೇಳಲಾಗಿದೆ.
ಈ ಸಂಬಂಧ ಯಾವುದೇ ದಾಖಲೆ ಪತ್ರಗಳು ಇಲ್ಲದಿದ್ದರೂ ಮೂರು ತಲೆಮಾರುಗಳಿಂದ ಇಲ್ಲೇ ವಾಸವಿದ್ದಾರೆ. ಆದರೆ ಸದರಿ ಜಮೀನಿಗೆ ತಾವೇ ಮಾಲೀಕರೆಂದು ಹೇಳಿಕೊಂಡು ಶಿವಾನಂದ ಎಂಬುವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಲ್ಲದೆ ರಾತ್ರೋ ರಾತ್ರಿ ಹಂದಿ ಜೋಗಿ ನಾಲ್ಕು ಕುಟುಂಬಸ್ಥರು ವಾಸವಿದ್ದ ಗುಡಿಸಿಲನ್ನು ನೆಲಸಮ ಮಾಡಿದ್ದಾರೆ. ಹಲವಾರು ವರ್ಷಗಳ ಕಾಲ ಆಶ್ರಯ ನೀಡಿದ ಜಾಗದಲ್ಲೇ ನಾವು ವಾಸ ಇರಬೇಕೆಂದು ನಾಲ್ಕು ಕುಟುಂಬಗಳು ನಿರ್ಧರಿಸಿದೆ.

ಎರಡು ದಿನಗಳ ಹಿಂದೆ ಗುಡಿಸಲುಗಳು ತೆರವಾದ್ರೂ ಜಾಗ ಖಾಲಿ ಮಾಡದೆ ರಾತ್ರಿ ಹಗಲೆನ್ನದೆ ಅದೇ ಜಾಗದಲ್ಲಿ ಕಾಲ ದೂಡುತ್ತಿದ್ದಾರೆ. ಈ ಜಾಗದಲ್ಲಿ ಬದುಕಲು ಅವಕಾಶ ನೀಡದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಆತ್ಮಹತ್ಯೆಗೆ ಗಟ್ಟಿ ನಿರ್ಧಾರ ತೆಗೆದುಕೊಂಡ ಕುಟುಂಬಗಳಿಗೆ ಜಿಲ್ಲಾಡಳಿತ ನೆರವಿಗೆ ಬರುವುದೇ ಕಾದು ನೋಡಬೇಕಿದೆ.

